ಹಾಕಿ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸದವಕಾಶ
ಮಾಜಿ ಕೋಚ್ ಜೋಸ್ ಬ್ರಾಸಾ

ಹೊಸದಿಲ್ಲಿ, ಡಿ.1: ಕಳೆದ ಒಂದು ದಶಕದಿಂದ ಪುನಶ್ಚೇತನದ ಹಾದಿಯಲ್ಲಿರುವ ಭಾರತ ಹಾಕಿ ತಂಡದ ಸಾಧನೆಯಿಂದ ತಾನು ಪ್ರಭಾವಿತನಾಗಿದ್ದು ಇದೀಗ ನಡೆಯುತ್ತಿರುವ ಹಾಕಿ ವಿಶ್ವಕಪ್ ಟ್ರೋಫಿ ಗೆಲ್ಲಲು ಭಾರತಕ್ಕೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಭಾರತ ಹಾಕಿ ತಂಡದ ಮಾಜಿ ಕೋಚ್, ಸ್ಪೇನ್‌ನ ಜೋಸ್ ಬ್ರಾಸಾ ಹೇಳಿದ್ದಾರೆ. ಬುಧವಾರ ಭುವನೇಶ್ವರದಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತೀಯರು ದಕ್ಷಿಣ ಆಫ್ರಿಕ ತಂಡವನ್ನು 5-0 ಅಂತರದಿಂದ ಮಣಿಸಿ ಶುಭಾರಂಭ ಮಾಡಿದ್ದಾರೆ. ಈ ಗೆಲುವಿನ ಸರಮಾಲೆಯನ್ನು ಮುಂದುವರಿಸಿ 43 ವರ್ಷಗಳ ವಿಶ್ವಕಪ್ ಟ್ರೋಫಿಯ ಬರವನ್ನು ಭಾರತ ನೀಗಿಸಿಕೊಳ್ಳಲು ಇದು ಸುಲಭದ ಅವಕಾಶವಾಗಿದೆ. ಆದರೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಬ್ರಾಸಾ ಹೇಳಿದ್ದಾರೆ.
ತವರು ನೆಲದಲ್ಲಿ ಅಪಾರ ಬೆಂಬಲಿಗರ ಎದುರು ಆಡುವ ಅನುಕೂಲತೆ ಭಾರತಕ್ಕಿದೆ. ಆದರೆ ಮಹತ್ವದ ಪಂದ್ಯದಲ್ಲಿ ಯಾವಾಗಲೂ ಭಾರತೀಯರ ಆಟ ಅನಿಶ್ಚಿತತೆಯಿಂದಲೇ ಸಾಗುತ್ತದೆ. ಆಸ್ಟ್ರೇಲಿಯಾ, ಬೆಲ್ಜಿಯಂ, ಹಾಲಂಡ್, ಜರ್ಮನಿ ಮುಂತಾದ ಪ್ರಮುಖ ತಂಡಗಳ ಸಾಲಿನಲ್ಲಿ ಭಾರತವೂ ಕಾಣಿಸಿಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸುಲಭದ ಪಂದ್ಯದಲ್ಲಿ ಸೋತು ಅವಕಾಶಗಳನ್ನು ವ್ಯರ್ಥಗೊಳಿಸಿದ ಸಾಕಷ್ಟು ನಿದರ್ಶನಗಳಿವೆ ಎಂದವರು ಹೇಳಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಅಗತ್ಯವಿರುವ ಅನುಭವದ ಕೊರತೆಯನ್ನು ಸ್ವದೇಶದ ಪ್ರೇಕ್ಷಕರ ಬೆಂಬಲದ ಬಲದಿಂದ ಸರಿದೂಗಿಸಿಕೊಳ್ಳಲು ಭಾರತಕ್ಕೆ ಈಗ ಸುವರ್ಣಾವಕಾಶ ಒದಗಿ ಬಂದಿದೆ. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಭಾರತ ಇನ್ನಷ್ಟು ಉತ್ತಮ ಪ್ರದರ್ಶನ ತೋರಬಹುದಿತ್ತು. ಆರಂಭದಲ್ಲೇ ಎರಡು ಗೋಲು ದಾಖಲಿಸಿದ ಬಳಿಕ ಅವರು ಹಿಡಿತ ಸಡಿಲಿಸಿದಂತೆ ಕಂಡು ಬಂದಿತು. ಇಂತಹ ಸುಲಭ ಪಂದ್ಯದಲ್ಲೂ ಇದಿರು ತಂಡಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಬಿಟ್ಟುಕೊಟ್ಟಿರುವುದು ಬಹುದೊಡ್ಡ ಪ್ರಮಾದವಾಗಿದೆ. ಬಲಿಷ್ಠ ತಂಡಗಳೆದುರು ಈ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ನಿರೀಕ್ಷಿಸಿದ್ದೇನೆ. ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ರಂತಹ ಅನುಭವಿ ಆಟಗಾರನಿಂದಾಗಿ ಭಾರತ ತಂಡಕ್ಕೆ ಹೆಚ್ಚಿನ ಅನುಕೂಲವಿದೆ. ಬೆಲ್ಜಿಯಂ ಎದುರು ಗೆಲುವು ಸಾಧಿಸಿ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಪ್ರಯತ್ನಿಸಬೇಕು ಎಂದರು.
ಭಾರತದಲ್ಲಿ ಈಗ ಬಹಳಷ್ಟು ಕೃತಕ ಹಾಕಿಪಿಚ್‌ಗಳಿವೆ. ಅಲ್ಲದೆ ಕಳೆದ 10 ವರ್ಷಗಳಲ್ಲಿ ಹಲವು ವಿದೇಶಿ ಕೋಚ್‌ಗಳು ಭಾರತ ತಂಡಕ್ಕೆ ತರಬೇತಿ ನೀಡಿದ್ದಾರೆ. ರೋಲೆಂಟ್ ಓಲ್ತಮಸ್, ರಿಕ್ ಚಾರ್ಲ್ಸ್‌ವರ್ತ್‌ರಂತಹ ಅನುಭವಿ ಕೋಚ್‌ಗಳಡಿ ಭಾರತೀಯ ಆಟಗಾರರು ಪಳಗಿದ್ದಾರೆ ಎಂದು ಬ್ರಾಸಾ ಹೇಳಿದ್ದಾರೆ. ಬ್ರಾಸ ಕೋಚ್ ಆಗಿದ್ದ ಸಂದರ್ಭ ಭಾರತ ತಂಡ 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಜತ ಪದಕ, ಹಾಂಕಾಂಗ್‌ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದೆ. 2009ರಲ್ಲಿ ಕೋಚ್ ಆಗಿ ನೇಮಕವಾಗಿದ್ದ ಬ್ರಾಸ್ ಗುತ್ತಿಗೆ ಅವಧಿ 2010ರಲ್ಲಿ ಕೊನೆಗೊಂಡ ಬಳಿಕ ಅವರ ಸೇವಾವಧಿಯನ್ನು ವಿಸ್ತರಿಸಿರಲಿಲ್ಲ. ಭಾರತ ರವಿವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ಎದುರು ಹಾಗೂ ಡಿಸೆಂಬರ್ 8ರಂದು ಕೆನಡಾದ ಎದುರು ಸೆಣಸಲಿದೆ.







