ವಿಜಯ್ ಶತಕ; ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ,ಡಿ.1: ಇಲ್ಲಿ ನಡೆದ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗರಾದ ಮುರಳಿ ವಿಜಯ್ ಶತಕ ಮತ್ತು ಲೋಕೇಶ್ ರಾಹುಲ್ ಅರ್ಧಶತಕ ದಾಖಲಿಸಿದ್ದಾರೆ. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
ಪಂದ್ಯದ ನಾಲ್ಕನೇ ದಿನವಾಗಿರುವ ರವಿವಾರ ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಮುರಳಿ ವಿಜಯ್ 129 ರನ್ (132ಎ, 16ಬೌ, 5ಸಿ) ಮತ್ತು ಲೋಕೇಶ್ ರಾಹುಲ್ 62 ರನ್(98ಎ, 8ಬೌ,1ಸಿ) ಮತ್ತು ಹನುಮ ವಿಹಾರಿ ಔಟಾಗದೆ 15 ರನ್ ಗಳಿಸಿದರು. ಭಾರತ 43.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿತು.
ಇಂಗ್ಲೆಂಡ್ ಪ್ರವಾಸ ಸರಣಿಯ ಮಧ್ಯದಲ್ಲಿ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದ ವಿಜಯ್ ಆಸ್ಟ್ರೇಲಿಯ ವಿರುದ್ಧ ಅಭ್ಯಾಸ ಪಂದ್ಯದಲ್ಲಿ 91 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಬಳಿಕ 27 ಎಸೆತಗಳಲ್ಲಿ 50 ರನ್ ಸೇರಿಸುವ ಮೂಲಕ 91 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಜಾಕೆ ಕಾರ್ಡೆರ್ ಅವರ ಒಂದು ಓವರ್‌ನಲ್ಲಿ 26 ರನ್ ಬಾರಿಸಿದರು.
ರಾಹುಲ್ ಮತ್ತು ವಿಜಯ್ ಮೊದಲ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ ಆತ್ಮವಿಶ್ವಾಸದಿಂದ ಆಡಿ ಅರ್ಧಶತಕ ಗಳಿಸಿದರು. ಆಸ್ಟ್ರೇಲಿಯದಲ್ಲಿ ಶತಕ ದಾಖಲಿಸುವ ಯೋಜನೆಯಲ್ಲಿರುವ ಹನುಮ ವಿಹಾರಿ ಸಿಕ್ಕಿದ ಅವಕಾಶದಲ್ಲಿ 32 ಎಸೆತಗಳಲ್ಲಿ 15 ರನ್ ಗಳಿಸಿದರು. ಅವರು ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರು.
ಇದಕ್ಕೂ ಮೊದಲು ಕ್ರಿಕೆಟ್ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 151.1 ಓವರ್‌ಗಳಲ್ಲಿ 544 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ವಿಕೆಟ್ ಕೀಪರ್ ಹ್ಯಾರಿ ನೆಲ್ಸನ್ 100 ರನ್(170ಎ, 9ಬೌ), ಡೇನಿಯಲ್ ಫಾಲಿನ್ಸ್ 43 ರನ್ ಲ್ಯುಕೆ ರಾಬಿನ್ಸ್ ಔಟಾಗದೆ 38 ರನ್ ಗಳಿಸಿದರು. ಭಾರತದ ವೇಗಿ ಮುಹಮ್ಮದ್ ಶಮಿ 24 ಓವರ್‌ಗಳಲ್ಲಿ 97ಕ್ಕೆ 3 ವಿಕೆಟ್, ಸ್ಪಿನ್ನರ್ ಆರ್. ಅಶ್ವಿನ್ 40 ಓವರ್‌ಗಳಲ್ಲಿ 122ಕ್ಕೆ 2 ವಿಕೆಟ್ ಪಡೆದರು. ಉಮೇಶ್ ಯಾದವ್ , ಇಶಾಂತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ತಲಾ 1 ವಿಕೆಟ್ ಪಡೆದರು. ಭಾರತ ಮೊದಲ ಇನಿಂಗ್ಸ್ ನಲ್ಲಿ 358 ರನ್ ಗಳಿಸಿತ್ತು.







