ಸಾಣೂರಿನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್

ಕಾರ್ಕಳ, ಡಿ.2: ‘ಮಾನವ ಜನಾಂಗಕ್ಕೆ ಶಿಕ್ಷಣವು ಅತಿಮುಖ್ಯವಾಗಿದ್ದು, ಜಾಗತಿಕವಾಗಿ ಮಾನವೀಯತೆ ಹರಡುವುದಕ್ಕೆ ಜ್ಞಾನ ಸಂಪಾದನೆಯ ಹಪಹಪಿ ಎಲ್ಲರಲ್ಲೂ ಇರಬೇಕು. ಗುಣಮಟ್ಟ ಮತ್ತು ವೈಚಾರಿಕ ನಿಲುವಿನ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಶಿಕ್ಷಣ ಪದ್ಧತಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಪಠ್ಯಗಳ ರಚನೆಯಲ್ಲಿಯೇ ತಜ್ಞತೆಯ ಅವಶ್ಯಕತೆಯಿದ್ದು, ಅದು ಪರಿಪೂರ್ಣತೆಯನ್ನು ಕೂಡಿದ್ದಲ್ಲಿ ವ್ಯಕ್ತಿಯ ಬದುಕಿಗೆ ಯಶಸ್ಸಿನ ಬಾಗಿಲನ್ನು ತೆರೆಯುತ್ತದೆ’ ಎಂದು ಕಾಸರಗೋಡಿನ ಜಾಮಿಅ ಸಅದಿಯ್ಯ ಶರೀಅತ್ ಕಾಲೇಜು ಪ್ರಾಂಶುಪಾಲ, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾ ಬೇಕಲ ಇಬ್ರಾಹೀಂ ಮುಸ್ಲಿಯಾರ್ ನುಡಿದರು.
ಅವರು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಕಳ ರೇಂಜ್, ಸುನ್ನೀ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಕಾರ್ಕಳ ರೀಜನಲ್, ಎಸ್‍ಜೆಎಂ, ಎಸ್‍ಎಂಎ ಕಾರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ನ.30ರಂದು ಸಾಣೂರು ವಲಿಯುಲ್ಲಾಹಿ ಶಾಹುಲ್ ಹಮೀದ್ (ಖ.ಸಿ.) ದರ್ಗಾ ವಠಾರದಲ್ಲಿ ನಡೆದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೌಲಾನಾ ಮಹಮ್ಮದ್ ಫಾಝಿಲ್ ರಝ್ವಿ ಕಾವಳ್‍ಕಟ್ಟೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಚೆರ್ವತ್ತೂರು ಸೈಯದ್ ಮುಹಮ್ಮದ್ ತ್ವಾಹಾ ತಂಙಳ್ ಅಲ್ ಮದನಿ ಆಶೀರ್ವಚನ ನೀಡಿದರು. ಕಾರ್ಕಳ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮರ್ ಸಅದಿ ಅಲ್ ಅಫ್ಳಲಿ ಉದ್ಘಾಟಿಸಿದರು.
ಕಾರ್ಕಳ ತಾಲೂಕು ಸುನ್ನೀ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಾಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್ ಬಜಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಸರ್‍ಹಿಂದ್ ದಅವಾ ಕಾಲೇಜು ಪ್ರಾಂಶುಪಾಲ ಮೌಲಾನಾ ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ದಿಕ್ಸೂಚಿ ಭಾಷಣ ಮಾಡಿದರು.
ಮುನೀರ್ ಸಖಾಫಿ ಉಳ್ಳಾಲ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಸಾಣೂರು ಬಂಟರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಹೊಸ್ಮಾರು ಜಮಾಅತ್ ಅಧ್ಯಕ್ಷ ಎಂ.ಎಚ್.ಸುಲೈಮಾನ್ ಸಅದಿ ಅಲ್ ಅಫ್ಳಲಿ, ಕಾರ್ಕಳ ಪುರಸಭಾ ಸದಸ್ಯ ಅಶ್ಪಾಕ್ ಅಹ್ಮದ್, ಇಂಜಿನಿಯರ್ ನಾಸಿರ್ ಶೇಖ್, ಉದ್ಯಮಿ ಮುಹಮ್ಮದ್ ಗೌಸ್, ಉದ್ಯಮಿ ಸಮದ್ ಖಾನ್, ಬಜಗೋಳಿ ಸುಲೈಮಾನ್ ಹಾಜಿ, ಮುಹಮ್ಮದ್ ಶರೀಫ್ ಮದನಿ ಬೊಳ್ಳೊಟ್ಟು, ಅಬ್ದುಸ್ಸಮದ್ ಬೊಳ್ಳೊಟ್ಟು ಉಪಸ್ಥಿತರಿದ್ದರು.
ಮುನಿಯಾಲು ನೌಫಲ್ ರಿಯಾಝ್ ಅಹ್ಸನಿ ಸ್ವಾಗತಿಸಿದರು. ಇಬ್ರಾಹೀಂ ಮದನಿ ಅಲ್ ಹುಮೈದಿ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಎನ್.ಸಿ. ಅಬ್ದುರ್ರಹೀಂ ವಂದಿಸಿದರು.