ದ.ಕ. ಆರ್‌ಸಿಎಚ್ ಅಮಾನತು; ದಸಂಸ ಹೋರಾಟಕ್ಕೆ ಸಿಕ್ಕ ಫಲ: ಮಾವಳ್ಳಿ ಶಂಕರ್

ಮಂಗಳೂರು, ಡಿ.2: ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಅಧಿಕಾರಿ ಡಾ.ಅಶೋಕ್ ಎಚ್. ಅವರು ಕಚೇರಿಯ ಮಹಿಳಾ ಸಿಬ್ಬಂದಿಗೆ ಅಶ್ಲೀಲ ಪದಗಳ ನಿಂದನೆ, ಮಾನಸಿಕ ಕಿರುಕುಳ, ವರ್ಗಾವಣೆ ಮಾಡುವ ಬೆದರಿಕೆಯೊಡ್ಡುವಂತಹ ಕಿರುಕುಳ ನೀಡುತ್ತಿದ್ದ ಆರೋಪದ ಬಗ್ಗೆ ದಸಂಸ ಅವಿರತವಾಗಿ ಹೋರಾಟ ಮಾಡಿತ್ತು. ಇದೀ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ದಸಂಸಕ್ಕೆ ಸಂದ ಯಶಸ್ಸು ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ನಗರದ ಮಿನಿ ವಿಧಾನಸೌಧದ ಬಳಿಯ ಸರಕಾರಿ ‘ಡಿ’ ನೌಕರರ ಸಭಾಂಗಣದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಸಿಎಚ್ ಅಧಿಕಾರಿ ವಿರುದ್ಧದ ದೂರಿನನ್ವಯ ಆಂತರಿಕ ತನಿಖಾ ವರದಿ ಆಧರಿಸಿ, ಕಳೆದ ಮೂರು ದಿನಗಳ ಹಿಂದೆ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಯು ಆರ್‌ಸಿಎಚ್ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದರು.
ಆರ್‌ಸಿಎಚ್ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಲ್ಲಿನ ಮಹಿಳಾ ಸಿಬ್ಬಂದಿ ಜಿಲ್ಲಾ ಆಂತರಿಕ ತನಿಖಾ ಸಮಿತಿಯ ಅಧ್ಯಕ್ಷರ ಹಾಗೂ ಸಂಘಟನೆಗೆ ದೂರು ನೀಡಲಾಗಿತ್ತು. ದೂರಿನನ್ವಯ 2018ರ ಜುಲೈ 31ರಂದು ತನಿಖೆಯ ನಡೆಸಲಾಗಿತ್ತು. ಈ ತನಿಖೆಯ ಅನ್ವಯ ಆರ್‌ಸಿಎಚ್ ಅಧಿಕಾರಿ ತಪ್ಪಿತಸ್ಥರು ಎಂದು ತನಿಖೆ ಮೂಲಕ ಸಾಬೀತಾಗಿದೆ ಎಂದರು.
ಆಂತರಿಕ ತನಿಖಾ ಸಂಸ್ಥೆಯ ವರದಿಯನ್ನು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಪರಿಶೀಲನೆ ನಡೆಸಿದರು. ಆರ್‌ಸಿಎಚ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರು. ಜಿಲ್ಲೆಗೆ ಇಂತಹ ಭ್ರಷ್ಟ ಅಧಿಕಾರಿಯ ಅಗತ್ಯತೆಯಿಲ್ಲ. ಆರೋಗ್ಯ ಇಲಾಖೆಯು ಈತನನ್ನು ಮರುಸೇರ್ಪಡೆಗೊಳಿಸಿದರೆ ಅಲ್ಲಿನ ಸಿಬ್ಬಂದಿ ಭಯಬೀತಗೊಂಡು ಕೆಲಸ ಮಾಡಲು ಅಸಾಧ್ಯವಾಗುತ್ತದೆ. ಜಿಲ್ಲಾಡಳಿತ ಮತ್ತು ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ದಸಂಸ ಆಗ್ರಹಿಸುತ್ತದೆ ಎಂದರು.