ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಅರೋರಾ ಅಧಿಕಾರ ಸ್ವೀಕಾರ
ಹೊಸದಿಲ್ಲಿ, ಡಿ. 2: ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಸುನಿಲ್ ಅರೋರಾ, ಚುನಾವಣೆಯನ್ನು ಸಂಪೂರ್ಣ ಮುಕ್ತ, ಪಾರದರ್ಶಕ ಹಾಗೂ ನೈತಿಕವಾಗಿ ನಡೆಸಲು ಜನರು ಹಾಗೂ ರಾಜಕೀಯ ಪಕ್ಷಗಳ ಸಹಕಾರ ಕೋರಿದ್ದಾರೆ.
ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿದ್ದು, ಶನಿವಾರ ನಿವೃತ್ತರಾದ ಒ.ಪಿ. ರಾವತ್ ಅವರ ಉತ್ತರಾಧಿಕಾರಿಯಾಗಿ ಸುನಿಲ್ ಅರೋರಾ ನೇಮಕರಾಗಿದ್ದಾರೆ.
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ 62 ವರ್ಷದ ಮಾಜಿ ಅಧಿಕಾರಿ ಸುನಿಲ್ ಅರೋರಾ ನೇತೃತ್ವದಲ್ಲಿ ಚುನಾವಣಾ ಸಮಿತಿ ರಚನೆಯಾಗಲಿದೆ.
ಸಂಸದೀಯ ಚುನಾವಣೆ ಅಲ್ಲದೆ ಇವರ ಅಧಿಕಾರವಧಿಯಲ್ಲಿ 2019ರಲ್ಲಿ ಜಮ್ಮು ಹಾಗೂ ಕಾಶ್ಮೀರ, ಒರಿಸ್ಸಾ, ಮಹಾರಾಷ್ಟ್ರ, ಹರ್ಯಾಣ, ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ವಿಧಾನ ಸಭೆ ಚುನಾವಣೆ ನಡೆಯಲಿದೆ.
ಸುನಿಲ್ ಅರೋರಾ ಅವರ ಅಧಿಕಾರಾವಧಿ 2021 ಎಪ್ರಿಲ್ 12ರ ವರೆಗೆ ಇರಲಿದೆ.
ಅಧಿಕಾರ ವಹಿಸಿಕೊಂಡ ಬಳಿಕ ನೂತನ ಮುಖ್ಯ ಚುನಾವಣಾ ಆಯುಕ್ತ ಅರೋರಾ, ಚುನಾವಣೆಯನ್ನು ಸಂಪೂರ್ಣ ಮುಕ್ತ, ಪಾರದರ್ಶಕ, ಶಾಂತಿಯುತ, ಸುಲಭ ಹಾಗೂ ನೈತಿಕವಾಗಿ ನಡೆಸಲು ಎಲ್ಲಾ ಪಾಲುದಾರರಾದ-ರಾಜಕೀಯ ಪಕ್ಷಗಳು, ಮಾಧ್ಯಮ, ನಾಗರಿಕ ಸಮಾಜ ಸಂಘಟನೆಗಳು ಹಾಗೂ ಜನರ ಸಹಕಾರ ಕೋರಿದ್ದಾರೆ. 2017 ಆಗಸ್ಟ್ 31ರಂದು ಅರೋರಾ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಮಾಹಿತಿ ಹಾಗೂ ಪ್ರಸಾರ ಕಾರ್ಯದರ್ಶಿ, ಕೌಶಲ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
ರಾಜಸ್ಥಾನ ಕೇಡರ್ನ 1980ರ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿರುವ ಅರೋರಾ ಹಣಕಾಸು, ಜವಳಿ ಹಾಗೂ ಯೋಜನಾ ಆಯೋಗದಲ್ಲಿ ಕಾರ್ಯ ನಿರ್ವಹಿಸಿದ್ದರು.