ಗುಜರಾತನ್ನೇ ನೋಡದ ನಾವು ಗುಜರಾತ್ ಹೀಗಿದೆ, ಅಭಿವೃದ್ಧಿಯಾಗಿದೆ ಎಂದು ವಂಚಿಸುತ್ತಿದ್ದೆವು
ಜನನುಡಿಯಲ್ಲಿ ನಮೋ ಬ್ರಿಗೇಡ್ ನಿಂದ ಹೊರಬಂದ ನಿಕೇತ್ ರಾಜ್ ಮೌರ್ಯ

#ನಮಗೆ ಮುಸ್ಲಿಮರ, ಕ್ರೈಸ್ತರ ವಿರುದ್ಧ ಪ್ರತೀಕಾರದ ಭಾವನೆ ಇತ್ತು
#ಆರೆಸ್ಸೆಸ್ ನ ನಿಲುವು ಮತ್ತು ವಾಸ್ತವ ಏನೆಂಬುದು ಅದರೊಳಗಿನವರಿಗೇ ಗೊತ್ತಾಗಿದೆ
#ವಿವೇಕಾನಂದರಿಗೆ ಪ್ರವಾದಿ ಮುಹಮ್ಮದ್, ಕ್ರೈಸ್ತ ಧರ್ಮದ ಬಗ್ಗೆ ಇದ್ದ ಗೌರವವನ್ನು ಮರೆಮಾಚಲಾಗುತ್ತಿದೆ
ಮಂಗಳೂರು, ಡಿ.2: "ಅಂದು ಸುಳ್ಳೇ ನಮ್ಮ ಬಂಡವಾಳವಾಗಿತ್ತು. ಅದನ್ನು ಭಾಷಣದ ಮೂಲಕ ಹೇಳಿ ಜನರನ್ನು ಮೋಸ ಮಾಡುತ್ತಿದ್ದೆವು. ನಮಗೆ ಮುಸ್ಲಿಮರ, ಕ್ರೈಸ್ತರ ವಿರುದ್ಧ ಪ್ರತೀಕಾರದ ಭಾವನೆ ಇತ್ತೇ ವಿನಃ ಬೇರೇನೂ ಇರಲಿಲ್ಲ. ಗುಜರಾತನ್ನೇ ನೋಡದ ನಾವು ನೋಡಿ ಗುಜರಾತ್ ಹೀಗಿವೆ, ಎಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿ ವಂಚಿಸುತ್ತಿದ್ದೆವು. ಸ್ವಾಮಿ ವಿವೇಕಾನಂದರ ಬಗ್ಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಲೇಖನ ಬರೆದಾಗ ಫೋನ್ ಕರೆ ಮಾಡಿ ಅವರನ್ನು ಬೈದವನಲ್ಲಿ ನಾನೂ ಒಬ್ಬ..."
ಇದು ಜಾಗೋ ಭಾರತ್, ನಮೋ ಬ್ರಿಗೇಡ್‌ನಲ್ಲಿ ಸಕ್ರಿಯರಾಗಿದ್ದ ತುಮಕೂರಿನ ನಿಕೇತ್ ರಾಜ್ ಮೌರ್ಯ ತನ್ನ ‘ಹೊರಳುನೋಟ’ದಲ್ಲಿ ಹೇಳಿದ ಮಾತುಗಳು.
"ಸ್ವಾಮಿ ವಿವೇಕಾನಂದರಿಗೆ ಪ್ರವಾದಿ ಮುಹಮ್ಮದರು, ಕ್ರೈಸ್ತ ಧರ್ಮದ ಬಗ್ಗೆ ಇದ್ದ ಗೌರವವನ್ನು ಮರೆಮಾಚಲಾಗುತ್ತದೆ. ವಿವೇಕಾನಂದರ ಬಗ್ಗೆ ಏನನ್ನೂ ಓದದ ನಾನು ಸಂಘದ ನಾಯಕರು ಹೇಳಿಕೊಟ್ಟದ್ದನ್ನೇ ಹೇಳಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದೆ. ಸಂಘದ ನಿಲುವು ಮತ್ತು ವಾಸ್ತವ ಏನು ಎಂಬುದು ಈಗ ಹೆಚ್ಚಿನವರಿಗೆ ಗೊತ್ತಾಗಿದೆ. ಆದರೆ ಧೈರ್ಯದಿಂದ ಹೇಳಿ ಹೊರಬರಲಾಗದೆ ತೊಳಲಾಡುತ್ತಿದ್ದಾರೆ. ಹೈದರಾಲಿ, ಟಿಪ್ಪುವನ್ನು ಮೊದಲು ಕೊಂಡಾಡಿದ್ದೇ ಬಿಜೆಪಿಯವರು. ಯಾವಾಗ ಸಿದ್ದರಾಮಯ್ಯ ಟಿಪ್ಪು ಜಯಂತಿಗೆ ಕರೆ ನೀಡಿದರೋ ಆ ಕ್ಷಣದಿಂದ ಬಿಜೆಪಿಗರಿಗೆ ಟಿಪ್ಪು ದೇಶದ್ರೋಹಿ, ಮತಾಂಧನಾಗಿ ಬಿಟ್ಟ" ಎಂದು ನಿಕೇತ್‌ರಾಜ್ ಮೌರ್ಯ ಬಿಜೆಪಿ-ಸಂಘಪರಿವಾರದ ದ್ವಿಮುಖ ನೀತಿಯನ್ನು ಬಹಿರಂಗಪಡಿಸಿದರು.
ಚುನಾವಣೆ ಸಮೀಪಿಸಿದಾಗ ಗೋಹತ್ಯೆ, ರಾಮಮಂದಿರವನ್ನು ಇವರು ಜಪಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಸಮಾನ ಮನಸ್ಕರು ಸೇರಿ ನಡೆಸುವ ಜನನುಡಿಯಂತಹ ಕಾರ್ಯಕ್ರಮಗಳಲ್ಲೇ ಇದರ ವಿರುದ್ಧ ಜಾಗೃತಿ ಹುಟ್ಟಬೇಕು. ಅದಕ್ಕಾಗಿ ಜನನುಡಿಯ ಸಮಾವೇಶ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು ಎಂದು ನಿಕೇತ್ ರಾಜ್ ಮೌರ್ಯ ಕರೆ ನೀಡಿದರು.