ಡಾ.ಝೈನಿ ಕಾಮಿಲ್ ಸಖಾಫಿಗೆ ಸನ್ಮಾನ

ಮಂಗಳೂರು,ಡಿ.2.ಅತೀ ಹೆಚ್ಚು ಧಾರ್ಮಿಕ ಉಪದೇಶಗಳನ್ನು ಕೇಳುವ ಮುಸ್ಲಿಂ ಸಮುದಾಯವು ಇಂದು ಆ ಉಪದೇಶವನ್ನು ಪಾಲಿಸದ ಕಾರಣ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆಂದು ಆಝಾದ್ ಗ್ರೂಪ್‌ನ ಅಧ್ಯಕ್ಷ ಹಾಜಿ ಮನ್ಸೂರ್ ಅಹ್ಮದ್ ಹೇಳಿದ್ದಾರೆ.
ಮದರಂಗಿ ಪತ್ರಿಕೆಯ ವತಿಯಿಂದ ಮಂಗಳೂರು ಸುನ್ನೀ ಜಂಇಯ್ಯತುಲ್ ಉಲಮಾ ಸಭಾಂಗಣದಲ್ಲಿ ರವಿವಾರ ನಡೆದ ಡಾ.ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿಯವರಿಗೆ ಸನ್ಮಾನ ಹಾಗೂ ಮದರಂಗಿ ಈದ್ ಮೀಲಾದ್ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಣಚೂರು ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುರ್ರಹ್ಮಾನ್ ಕಣಚೂರು ಮಾತನಾಡಿ ಡಾ. ಝೈನಿ ಕಾಮಿಲ್ ಸಖಾಫಿ ಅದ್ಭುತ ಪ್ರತಿಭೆಯಾಗಿದ್ದು ಇದೀಗ ಡಾಕ್ಟರೇಟ್ ಪದವಿ ಪಡೆಯುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಯುವ ಲೇಖಕ ಮುಹಮ್ಮದ್ ಇಸ್ಮತ್ ಪಜೀರ್ ಮಾತನಾಡಿದರು. ಮದರಂಗಿ ಪತ್ರಿಕೆ ಸಂಪಾದಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ಅಧ್ಯಕ್ಷತೆ ವಹಿಸಿದ್ದರು. ಉವೈಸ್ ಬೀಟಿಗೆ ಸನ್ಮಾನ ಪತ್ರ ವಾಚಿಸಿದರು.
ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಿಸ್ರಿಯಾ ಐ. ಪಜೀರ್, ದ್ವಿತೀಯ ಬಹುಮಾನ ಪಡೆದ ರಹ್ಮತ್ ಪುತ್ತೂರು, ತೃತೀಯ ಬಹುಮಾನ ಪಡೆದ ರಹ್ಮತ್ ನಂದರಬೆಟ್ಟು ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ಸಾಜಿದಾ ಬಜ್ಪೆ, ಮುಹಮ್ಮದ್ ರಫೀಕ್ ಕಲ್ಕಟ್ಟ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭ ಸೈಯದ್ ತುರಾಬ್ ತಂಙಳ್, ಶಾಫಿ ಮಿಸ್ಬಾಹಿ ಬಜಾಲ್, ಮರ್ಸೀನ್ ಪ್ರಕಾಶನ ಸಂಸ್ಥೆಯ ಮಾಲಕ ಮುಹಮ್ಮದ್ ಮದನಿ ಉಪಸ್ಥಿತರಿದ್ದರು. ಮದರಂಗಿ ಪ್ರಕಾಶಕ ಡಿ.ಐ.ಅಬೂಬಕರ್ ಕೈರಂಗಳ ಸ್ವಾಗತಿಸಿದರು.