ಹವಾಲಾ ಜಾಲ ಭೇದಿಸಿದ ಐಟಿ ಅಧಿಕಾರಿಗಳು: 25 ಕೋ.ರೂ.ವಶ
100 ಲಾಕರ್ ಗಳ ಮೇಲೆ ದಾಳಿ

ಹೊಸದಿಲ್ಲಿ,ಡಿ.2: ದಿಲ್ಲಿಯ ಚಾಂದನಿ ಚೌಕ್ ಪ್ರದೇಶದಲ್ಲಿನ 100 ಖಾಸಗಿ ಲಾಕರ್ಗಳ ಮೇಲೆ ರವಿವಾರ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 25 ಕೋ.ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಕನಿಷ್ಠ ಎಂಟು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿತ್ತು ಎಂದು ಇಲಾಖಾ ಮೂಲಗಳು ತಿಳಿಸಿವೆ.
ಹವಾಲಾ ವ್ಯಾಪಾರಿಗಳು ತಮ್ಮ ಹಣವನ್ನಿಡಲು ಖಾಸಗಿ ಲಾಕರ್ಗಳನ್ನು ಬಳಸುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆೆಯಿಂದ ಗೊತ್ತಾಗಿದೆ ಎಂದು ಅವು ಹೇಳಿದವು.
ಈ ಹಣವು ತಂಬಾಕು,ರಾಸಾಯನಿಕಗಳು ಮತ್ತು ಒಣಹಣ್ಣುಗಳ ವ್ಯಾಪಾರಿಗಳು ಸೇರಿದಂತೆ ನಗರದ ಕೆಲವು ಗಣ್ಯವಕ್ತಿಗಳಿಗೆ ಸೇರಿದ್ದು ಎನ್ನಲಾಗಿದೆ. ಈ ಉದ್ಯಮಿಗಳು ಹವಾಲಾ ವ್ಯಾಪಾರದಲ್ಲಿ ತೊಡಗಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಧ್ಯವರ್ತಿಗಳ ಸಂಪರ್ಕ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿದವು.
ಇದು ಈ ವರ್ಷ ಆದಾಯ ತೆರಿಗೆ ಇಲಾಖೆಯು ನಡೆಸಿದ ಮೂರನೇ ಬೃಹತ್ ಲಾಕರ್ ಕಾರ್ಯಾಚರಣೆಯಾಗಿದೆ. ಸೆಪ್ಟೆಂಬರ್ನಲ್ಲಿ ದುಬೈ ನಂಟಿನ 700 ಕೋ.ರೂ.ಹವಾಲಾ ಜಾಲಕ್ಕೆ ಸಂಬಂಧಿಸಿದಂತೆ ದಿಲ್ಲಿ ಮತ್ತು ಮುಂಬೈನ ಹಲವೆಡೆಗಳಲ್ಲಿ ದಾಳಿ ನಡೆಸಿ 29 ಲ.ರೂ.ನಗದು ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ದುಬೈನ ಹವಾಲಾ ವ್ಯಾಪಾರಿ ಪಂಕಜ್ ಕಪೂರ್ನೊಂದಿಗೆ ಗುರುತಿಸಿಕೊಂಡಿರುವ ಉದ್ಯಮಗಳು ಮತ್ತು ಅಕ್ರಮ ಹಣಕಾಸು ವಹಿವಾಟುಗಳಿಗೆ ಈ ದಾಳಿಗಳು ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿದವು. 3,700 ಕೋ.ರೂ.ಗಳ ಹವಾಲಾ ಪ್ರಕರಣವೊಂದರಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಈಗಾಗಲೇ ಕಪೂರ್ನ ತನಿಖೆ ನಡೆಸುತ್ತಿದೆ..
ಜನವರಿಯಲ್ಲಿ ದಿಲ್ಲಿಯ ಇನ್ನೊಂದು ಖಾಸಗಿ ಲಾಕರ್ ಮೇಲೆೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 40 ಕೋ.ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದರು.