'ಸಿರಿ'ಯ ಪ್ರದರ್ಶನಕ್ಕಿಂತ ಬದುಕು ಮುಖ್ಯ: ಮಾವಳ್ಳಿ ಶಂಕರ್

ಮಂಗಳೂರು, ಡಿ.2: ‘ನುಡಿಸಿರಿ’ಯಂತಹ 'ಸಿರಿ'ಯ ಗರ್ವ ಪ್ರದರ್ಶನಕ್ಕೆ ಪರ್ಯಾಯವಾಗಿ ಸಿರಿಯಲ್ಲಿ ಬದುಕು ಕಂಡುಕೊಂಡ ‘ಜನನುಡಿ’ ಎಷ್ಟೋ ಪಾಲು ಮಹತ್ವದ್ದಾಗಿದೆ ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಶ್ಲಾಘನೆ ವ್ಯಕ್ತಪಡಿಸಿದರು.
ನಗರದ ನಂತೂರು ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಮಂಗಳೂರು ವತಿಯಿಂದ ರವಿವಾರ ಹಮ್ಮಿಕೊಳ್ಳಲಾದ ಜನನುಡಿ 5ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಲಿಷ್ಠ ಭಾರತ ಎನ್ನುವ ಮಾತುಗಳನ್ನು ಆಡುವ ಮೂಲಕ ಕೋಮುವಾದಿ ಶಕ್ತಿಗಳು ಭಾರತವನ್ನು ವಿಭಜಿಸುವ ತಂತ್ರಗಳನ್ನು ಹೂಡುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಜಾಗೃತಿಯ ಚಳವಳಿಯಾಗಬೇಕು ಎಂದರು.
2019ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನದ ಉಳಿವಿಗೆ ಹಾಗೂ ಬಹುತ್ವದ ಭಾರತದ ಉಳಿವಿಗೆ ಪ್ರಾಮಾಣಿಕ ಹೋರಾಟ ಅಗತ್ಯ. ಸಂವಿಧಾನ ವಿರೋಧಿಗಳು ಚುನಾವಣೆಯನ್ನು ಎದುರಿಸಲು ನಾನಾ ತಂತ್ರಗಳನ್ನು ರೂಪಿಸುತ್ತಿವೆ. ಮತದಾರರ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಬದಲು ಈ ಬಾರಿ ಎಚ್ಚರಿಕೆ ವಹಿಸಿ ಮುಂದೆ ಹೆಜ್ಜೆ ಇಡಬೇಕು ಎಂದು ಹೇಳಿದರು.
ಕಾರ್ಮಿಕ ಚಳವಳಿ ಮುಂದಾಳು, ಹೋರಾಟಗಾರ್ತಿ ಎಸ್.ವರಲಕ್ಷ್ಮೀ ಮಾತನಾಡಿ, ಬಿಜೆಪಿ ಸರಕಾರದಿಂದ ಕಳೆದ 4 ವರ್ಷಗಳಲ್ಲಿ ಸಿಕ್ಕಿದ್ದು ಕೇವಲ ಘೋಷಣೆಗಳು ಮಾತ್ರ. ಅದರಿಂದಲೇ ಜನರ ಹೊಟ್ಟೆ ತುಂಬಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಉದ್ಯೋಗ ನೀಡುತ್ತೇವೆ ಎಂದರು, ನೋಟು ಅಮಾನ್ಯ ಮಾಡಿ 70 ಲಕ್ಷ ಉದ್ಯೋಗಗಳನ್ನು ನಾಶ ಮಾಡಿದರು. ಇತ್ತೀಚೆಗೆ ರೈಲ್ವೆ ಇಲಾಖೆ ಸಿ,ಡಿ ಗ್ರೂಪ್‌ನ 60 ಸಾವಿರ ಹುದ್ದೆಗೆ 1.09 ಲಕ್ಷ ಅರ್ಜಿಗಳು ಬಂದಿವೆ ಎಂದರೆ ನಿರುದ್ಯೋಗ ಸ್ಥಿತಿಗೆ ಕೇಂದ್ರ ಸರಕಾರ ತಳ್ಳಿದ್ದು ನಿಚ್ಚಳವಾಗಿದೆ ಎಂದು ಆರೋಪಿಸಿದರು.
ಆರೆಸ್ಸೆಸ್ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ, ಕಾರ್ಮಿಕ, ಶಿಕ್ಷಕ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಪಾಯ ಮುಂದಿದೆ. ಇದರ ವಿರುದ್ಧ ಎಲ್ಲರೂ ಒಂದಾಗಬೇಕಿದೆ ಎಂದು ಕರೆ ನೀಡಿದರು.