ಹನುಮಾನ್ ದೇವಸ್ಥಾನಗಳನ್ನು ದಲಿತರು ಸ್ವಾಧೀನಪಡಿಸಿಕೊಳ್ಳಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್
ಲಕ್ನೊ, ಡಿ.2: ಹನುಮಂತ ದಲಿತ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ , ದೇಶದಾದ್ಯಂತ ಹನುಮಂತ ದೇವಸ್ಥಾನದ ಆಡಳಿತವನ್ನು ದಲಿತ ಸಮುದಾಯದವರು ಸ್ವಾಧೀನಪಡಿಸಿಕೊಂಡು ದಲಿತ ಅರ್ಚಕರನ್ನು ನೇಮಿಸಿಕೊಳ್ಳಬೇಕು ಎಂದು ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಕರೆ ನೀಡಿದ್ದಾರೆ.
ಮಂಗಳವಾರ ರಾಜಸ್ತಾನದ ಆಲ್ವಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಆದಿತ್ಯನಾಥ್, ಹನುಮಂತ ಅರಣ್ಯದಲ್ಲಿ ವಾಸಿಸುತ್ತಿದ್ದ ದಲಿತನಾಗಿದ್ದ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್, ಮುಖ್ಯಮಂತ್ರಿಗಳ ಹೇಳಿಕೆಗೆ ತನ್ನ ಸಹಮತವಿದೆ. ಇದೀಗ ದೇಶದಾದ್ಯಂತ ಹನುಮಂತ ದೇವಸ್ಥಾನಗಳನ್ನು ದಲಿತರು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಈ ಮಧ್ಯೆ, ಹನುಮಂತನನ್ನು ದಲಿತ ಎಂದು ಹೇಳಿರುವುದಕ್ಕೆ ಕ್ಷಮೆ ಯಾಚಿಸಬೇಕೆಂದು ಸೂಚಿಸಿ ರಾಜಸ್ತಾನದ ಬಲಪಂಥೀಯ ಸಂಘಟನೆಯೊಂದು ಆದಿತ್ಯನಾಥ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಕರುಕಾಹ್‌ನಲ್ಲಿ ಜನತೆ ಆಡುವ ಭಾಷೆಗೆ ಟಿಗ್ಗ(ಮಂಗ) ಎಂಬ ಹೆಸರಿದೆ. ನಮ್ಮ ಕನ್ವರ್ ಪಂಗಡದಲ್ಲಿ ‘ಹನುಮಾನ್’ ಎಂಬ ಹೆಸರಿನ ವಂಶವೊಂದಿದೆ. ಆದ್ದರಿಂದ ಹನುಮ ಬುಡಕಟ್ಟು ವಂಶಕ್ಕೆ ಸೇರಿದವನಾಗಿರಬೇಕು ಮತ್ತು ರಾವಣನ ಎದುರಿನ ಯುದ್ದದಲ್ಲಿ ರಾಮನ ಪರ ಹೋರಾಟ ನಡೆಸಿರಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಯ್ ಹೇಳಿದ್ದಾರೆ.