ಇಂದು ನ್ಯಾಯಾಲಯ ನಿಯೋಜಿತ ಸಮಿತಿಯಿಂದ ಶಬರಿಮಲೆ ಭೇಟಿ
ಕೊಚ್ಚಿ, ಡಿ. 2: ಕೇರಳ ಉಚ್ಚ ನ್ಯಾಯಾಲಯ ಕಳೆದ ವಾರ ನಿಯೋಜಿಸಿದ ಶಬರಿಮಲೆ ಪರಿವೀಕ್ಷಕರ ಮೂವರು ಸದಸ್ಯರ ಸಮಿತಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಾಕಷ್ಟು ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಲು ಸೋಮವಾರ ನೀಲಕ್ಕಲ್ ಹಾಗೂ ಪಂಬಾದ ಮೂಲ ಶಿಬಿರಕ್ಕೆ ಭೇಟಿ ನೀಡಲಿದೆ.
ರವಿವಾರ ನಡೆದ ಸಮಿತಿಯ ಮೊದಲ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಆರ್. ರಾಮನ್, ಶೌಚಾಲಯ ಹಾಗೂ ಕುಡಿಯುವ ನೀರು ಸಹಿತ ಯಾತ್ರಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಆಹಾರ ಹಾಗೂ ಇತರ ಮೂಲಭೂತ ಸೌಕರ್ಯಗಳ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾತ್ರಾರ್ಥಿಗಳಿಗೆ ಸೌಲಭ್ಯ ಒದಗಿಸುವುದರೊಂದಿಗೆ ಸಮಿತಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಕ್ಷೇತ್ರ ಭೇಟಿ ಹಾಗೂ ಪರಿಸ್ಥಿತಿ ಮೌಲ್ಯಮಾಪನದ ಬಳಿಕ ಸಲಹೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಮಿತಿ ಸದಸ್ಯರು ಮೊದಲು ನೀಲಕ್ಕಲ್‌ಗೆ ಭೇಟಿ ನೀಡಲಿದ್ದಾರೆ. ಅನಂತರ ಇತರ ಪ್ರದೇಶಗಳಿಗೆ ತೆರಳಲಿದ್ದಾರೆ. ಶಬರಿಮಲೆ ವಿಶೇಷ ಆಯುಕ್ತ ಎಂ. ಮನೋಜ್ ಸಂಯೋಜಿಸಿರುವ ವಿವಿಧ ಭಾಗೀದಾರರೊಂದಿಗಿನ ಸಮಿತಿ ಸದಸ್ಯರ ಸಭೆ ಸನ್ನಿಧಾನಂನಲ್ಲಿ ಮಂಗಳವಾರ ಅಪರಾಹ್ನ 2.30ಕ್ಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ರಾಮನ್ ಅಲ್ಲದೆ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಿರಿ ಜಗನ್, ಡಿಜಿಪಿ ಎ. ಹೇಮಚಂದ್ರನ್ ಇತರ ಸದಸ್ಯರು ಸಮಿತಿಯಲ್ಲಿ ಇದ್ದಾರೆ.