ಮಣಿಪಾಲ : ವಾಕಿಂಗ್ ತೆರಳಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ದರೋಡೆ

ಮಣಿಪಾಲ, ಡಿ.2: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಆರು ಮಂದಿ ದರೋಡೆಕೋರರ ತಂಡವೊಂದು ಕಾರಿನಲ್ಲಿ ಅಪಹರಿಸಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಇಂದು ಬೆಳಗಿನ ಜಾವ 4.45ರ ಸುಮಾರಿಗೆ ಮಣಿಪಾಲ ಲಕ್ಷ್ಮೀಂದ್ರನಗರ ಎಂಬಲ್ಲಿ ನಡೆದಿದೆ.
ಲಕ್ಷ್ಮೀಂದ್ರನಗರದ ವಿಜಯ್ ಕುಮಾರ್ ಎ.ಎಸ್.(65) ಎಂಬವರು ಕುಂಜಿ ಬೆಟ್ಟು ಎಂಜಿಎಂ ಕಾಲೇಜಿನ ಕಡೆಯಿಂದ ಲಕ್ಷ್ಮೀಂದ್ರನಗರದ ಕಡೆಗೆ ವಾಕಿಂಗ್ ಹೋಗುತ್ತಿರುವಾಗ ಉಡುಪಿ ಕಡೆಯಿಂದ ಬಂದ ಓಮಿನಿ ಕಾರು, ವಿಜಯ್ ಕುಮಾರ್ ಹತ್ತಿರ ನಿಲ್ಲಿಸಿದ್ದು, ಅದರಲ್ಲಿದ್ದ ಒಬ್ಬ ವ್ಯಕ್ತಿ ಅವರನ್ನು ಬಲತ್ಕಾರವಾಗಿ ಕಾರಿನ ಒಳಗೆ ಎಳೆದು ಹಾಕಿದ ಎನ್ನಲಾಗಿದೆ.
ಕಾರಿನಲ್ಲಿ ಒಟ್ಟು ಏಳು ಮಂದಿ ಇದ್ದು, ಅವರೆಲ್ಲರು ಮುಖಕ್ಕೆ ಬಟ್ಟೆ ಕಟ್ಟಿ ಕೊಂಡಿದ್ದರು. ಬಳಿಕ ದರೋಡೆಕೋರರು ವಿಜಯ್ ಕುಮಾರ್‌ರ ಕಣ್ಣು, ಬಾಯಿ ಮತ್ತು ಕೈಗೆ ಪ್ಲಾಸ್ಟಿಕ್ ಟೇಪನ್ನು ಅಂಟಿಸಿ, ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಅಲ್ಲದೆ ವಿಜಯ್ ಕುಮಾರ್‌ರ ಪ್ಯಾಂಟಿನ ಕಿಸೆಯಲ್ಲಿದ್ದ 120 ರೂ. ಹಾಗೂ ಕೈಬೆರಳಲ್ಲಿ ಇದ್ದ ಸುಮಾರು 50,000 ರೂ. ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಕಸಿದುಕೊಂಡರೆಂದು ದೂರಲಾಗಿದೆ. ಬಳಿಕ ಉಡುಪಿಯ ಕಿನ್ನಿಮೂಲ್ಕಿ ಎಂಬಲ್ಲಿ ವಿಜಯ ಕುಮಾರ್‌ರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.