ಮಾಜಿ ಪಿಎಸ್ಸೈ ಜತೆಗಿದ್ದು ದಿಢೀರ್ ನಾಪತ್ತೆಯಾಗಿದ್ದ ವಿನಾಯಕ ಪತ್ತೆ
ಮದನ್ ಮೇಲಿದ್ದ ಊಹಾಪೋಹಗಳಿಗೆ ತೆರೆ

ವಿನಾಯಕ
ಮಂಗಳೂರು, ಡಿ.2: ಮಾಜಿ ಪಿಎಸ್ಸೈ ಮದನ್ ಜತೆಗಿದ್ದು ದಿಢೀರ್ ನಾಪತ್ತೆಯಾಗಿದ್ದ ಶಕ್ತಿನಗರದ ವಿನಾಯಕ್ನನ್ನು ಕೇರಳದ ಕೊಚ್ಚಿನ್ನಲ್ಲಿ ಅಲ್ಲಿನ ಪೊಲೀಸರು ಪತ್ತೆ ಮಾಡಿ ಉರ್ವ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಶಕ್ತಿನಗರದ ನಿವಾಸಿ ಆಟೋ ಚಾಲಕ ಶಿವಕುಮಾರ್-ಸಾಕಮ್ಮ ದಂಪತಿ ಪುತ್ರ ವಿನಾಯಕ ನ.8ರಂದು ಬಿಜೈ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ. ವಿನಾಯಕ್ ನಾಪತ್ತೆ ಆಗಿರುವುದನ್ನು ನ.15ರಂದು ಮದನ್ ಕರೆ ಮಾಡಿ ಆತನ ಹೆತ್ತವರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪುತ್ರ ನಾಪತ್ತೆಯಾಗಿರುವುದರಲ್ಲಿ ಮದನ್ ಪಾತ್ರವಿದೆ. ಉರ್ವ ಪೊಲೀಸರು ಮದನ್ ಪರ ಇದ್ದು, ಪುತ್ರನನ್ನು ಪತ್ತೆ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ಅನುಮಾನದಿಂದ ಹೈಕೋರ್ಟ್ನಲ್ಲಿ ಪುತ್ರನನ್ನು ಪತ್ತೆ ಮಾಡಿ ಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಾಪತ್ತೆಯಾಗಿರುವ ವಿನಾಯಕನನ್ನು ಪತ್ತೆ ಮಾಡಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಹೈಕೋರ್ಟ್ ಆದೇಶಿಸಿತ್ತು.
ಉರ್ವ ಪೊಲೀಸರು ಡಿ.3ರಂದು ಹೈಕೋರ್ಟ್ನಲ್ಲಿ ವಿನಾಯಕನನ್ನು ಹಾಜರುಪಡಿಸಲಿದ್ದಾರೆ. ಅಲ್ಲಿ ಆತನನ್ನು ಹೆತ್ತವರ ವಶಕ್ಕೆ ನೀಡಲಿದ್ದಾರೆ. ಈ ಮೂಲಕ ನಾಪತ್ತೆ ಪ್ರಕರಣದಲ್ಲಿ ಮದನ್ ಮೇಲಿದ್ದ ಹಲವು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
‘ಪುತ್ರ ದೇವರ ದಯೆಯಿಂದ ಕೊಚ್ಚಿನ್ನಲ್ಲಿ ಪತ್ತೆಯಾಗಿದ್ದಾನೆ. ಅಲ್ಲಿ ಉತ್ತಮ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೈಕೋರ್ಟ್ನಲ್ಲಿ ಆತನನ್ನು ಪೊಲೀಸರ ವಶದಿಂದ ಕರೆದುಕೊಂಡು ಮಂಗಳೂರಿಗೆ ಬರುತ್ತೇವೆ. ಆತ ಮಂಗಳೂರಿನಲ್ಲೇ ಕೆಲಸ ಮಾಡಿಕೊಂಡು ಇರಬೇಕು ಎಂಬುದು ನಮ್ಮ ಆಸೆ’ ಎಂದು ಆತನ ತಂದೆ ಶಿವಕುಮಾರ್ ತಿಳಿಸಿದ್ದಾರೆ.