ಕನ್ನಡವು ಹಿಂದೂ ಭಾಷೆಯೆಂಬ ಪ್ರಚಾರ ಅಪಾಯಕಾರಿ: ವಿಚಾರವಾದಿ ಡಾ.ಸರ್ಜಾಶಂಕರ ಹರಳಿಮಠ

ಶಿವಮೊಗ್ಗ, ಡಿ. 2: ಪ್ರತಿಯೊಂದು ನಾಡಿನಲ್ಲೂ ಪ್ರಬಲ ಧರ್ಮವು ಅಲ್ಲಿನ ಭಾಷೆಯನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳಲು ಹವಣಿಸುತ್ತಿರುತ್ತದೆ. ಕನ್ನಡ ಭಾಷೆಯ ವಿಷಯದಲ್ಲಿ ಇದು ಕಂಡುಬರುತ್ತದೆ’ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹ ಸಂಶೋಧಕ ಡಾ. ಸರ್ಜಾಶಂಕರ ಹರಳಿಮಠ ತಿಳಿಸಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಸಹಯೋಗದೊಂದಿಗೆ ಕುವೆಂಪು ವಿವಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಕನ್ನಡ ಸಂಶೋಧನೆ ಚರಿತ್ರೆ ಮತ್ತು ಇತ್ತೀಚಿನ ಬೆಳವಣಿಗೆಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ‘ಕನ್ನಡ ಅಸ್ಮಿತೆಗೆ ಎರವಾಗುವ ಚಿಂತನೆಗಳು’ ಎನ್ನುವ ವಿಷಯದ ಮೇಲೆ ಪ್ರಬಂಧ ಮಂಡಿಸಿದರು. ಪಾಕಿಸ್ತಾನದಲ್ಲಿ ಇಸ್ಲಾಂ ಮೂಲಭೂತವಾದಿಗಳು ಉರ್ದುವನ್ನು, ಭಾರತದಲ್ಲಿ ಕನ್ನಡದಂತಹ ದೇಶಿ ಭಾಷೆಗಳನ್ನು ಹಿಂದುತ್ವದ ಮೂಲಭೂತವಾದಿಗಳು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಪ್ರಯತ್ನವನ್ನು ಕನ್ನಡವನ್ನೂ ಒಳಗೊಂಡಂತೆ ದೇಶಿ ಭಾಷೆಗಳ ಪ್ರಜ್ಞಾವಂತರು ವಿರೋಧಿಸುತ್ತಲೇ ಬಂದಿದ್ದಾರೆ ಎಂದರು. ಕನ್ನಡವು ಹಿಂದೂ ಭಾಷೆಯೆಂಬ ಪ್ರಚಾರವು ಅಪಾಯಕಾರಿಯಾಗಿದೆ. ಯಾಕೆಂದರೆ ತನ್ನೊಟ್ಟಿಗೆ ಬದುಕುತ್ತಿರುವ ಕನ್ನಡೇತರ ಭಾಷಿಕ ಸಮುದಾಯಗಳನ್ನು ಮತ್ತು ‘ಹಿಂದೂ’ ಅಲ್ಲದ ಧಾರ್ಮಿಕ ಸಮುದಾಯಗಳನ್ನು ಇಲ್ಲಿ ಶತ್ರುಗಳನ್ನಾಗಿ ನೋಡಲಾಗುತ್ತದೆ. ಇಸ್ಲಾಂ, ಕ್ರಿಶ್ಚಿಯನ್‍ನಂತಹ ಧರ್ಮಗಳು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿದರು.
ನಿಜ ಶತ್ರುಗಳಾದ ಹಿಂದಿ ಇಂಗ್ಲಿಷ್ ಹೇರಿಕೆಯನ್ನು ಕಡೆಗಣಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಕನ್ನಡ ಭಾಷೆಯನ್ನು ಜಾತ್ಯತೀತ ಮತ್ತು ಧರ್ಮಾತೀತ ನೆಲೆಯಲ್ಲಿ ಕಟ್ಟಬಯಸುವ ಹಂಬಲ ಶತಮಾನದುದ್ದಕ್ಕೂ ಕ್ರಿಯಾಶೀಲವಾಗಿದೆ ಎಂದು ತಿಳಿಸಿದರು.
ಸಹ ಸಂಶೋಧಕ ಡಾ.ಎಂ.ಭೈರಪ್ಪರವರು ‘ಜಾನಪದ ಮತ್ತು ಲಿಖಿತ ಪರಂಪರೆಯಲ್ಲಿ ಚಾಮುಂಡಿ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿ, ಲಿಖಿತ ಪುರಾಣಗಳಲ್ಲಿ ಮತ್ತು ಸಂಸ್ಕೃತ ಸ್ತ್ರೋತ್ರಗಳಲ್ಲಿ ಚಾಮುಂಡಿಯನ್ನು ಅಸುರ ಸಂಹಾರಕಿ ಎಂದು ಬಿಂಬಿಸಲಾಗಿದ್ದರೆ, ಜಾನಪದದಲ್ಲಿ ಸಾಮಾನ್ಯ ಮಹಿಳೆಯಂತೆ ಕಟ್ಟಿಕೊಡಲಾಗಿದೆ ಎಂದರು.
ಈ ಎರಡೂ ಗ್ರಹಿಕೆಗಳನ್ನು ಶಾಸನ, ಪುರಾಣ, ಬೌದ್ಧ ಗ್ರಂಥಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದಾಗ ಚಾಮುಂಡಿಯು ಉತ್ತರದಿಂದ ದಕ್ಷಿಣಕ್ಕೆ ಬೌಧ್ಧ ಧರ್ಮ ಪ್ರಚಾರಕ್ಕಾಗಿ ಬಿಕ್ಕುಣಿಯಾಗಿ ಬಂದಿರಬಹುದು ಎನ್ನುವ ನಂಬಿಕೆ ಬರುತ್ತದೆ ಎಂದು ತಿಳಿಸಿದರು. ಡಾ. ಎಂ. ಮಂಜುಳಾಕ್ಷಿ ಅವರು ಕನ್ನಡದಲ್ಲಿ ಭಾಷಾ ವಿಜ್ಞಾನವನ್ನು ಕುರಿತ ಅಧ್ಯಯನಗಳು ಕುರಿತು ಮತ್ತು ಚಿದಾನಂದ ಮಾಸನಕಟ್ಟಿ ಅವರು ‘ಪಂಪ: ಜೈನ ಯತಿಯೇ?’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದರು. ಕೇಂದ್ರದ ನಿರ್ದೇಶಕರಾದ ಡಾ.ಕೆ.ಆರ್ ದುರ್ಗಾದಾಸ್ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.







