ಭಾರತ-ಬೆಲ್ಜಿಯಂ ಪಂದ್ಯ ರೋಚಕ ಡ್ರಾ
ಹಾಕಿ ವಿಶ್ವಕಪ್

ಭುವನೇಶ್ವರ, ಡಿ.2: ಅತ್ಯುತ್ತಮ ಪ್ರದರ್ಶನ ನೀಡಿದ ಆತಿಥೇಯ ಭಾರತ ತಂಡ ಬೆಲ್ಜಿಯಂ ವಿರುದ್ಧ ರವಿವಾರ ನಡೆದ ಹಾಕಿ ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ 2-2 ಅಂತರದಿಂದ ರೋಚಕ ಡ್ರಾ ಸಾಧಿಸಿದೆ. ಕಳಿಂಗ ಸ್ಟೇಡಿಯಂನಲ್ಲಿ ಬೆಲ್ಜಿಯಂ 8ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಸಾಧಿಸಿತು. ಗೋಲುಕೀಪರ್ ಪಿ.ಆರ್. ಶ್ರೀಜೇಶ್‌ರನ್ನು ವಂಚಿಸಿದ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಬೆಲ್ಜಿಯಂಗೆ ಆರಂಭಿಕ ಮುನ್ನಡೆ ಒದಗಿಸಿದರು.
ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದ ಭಾರತದ ಪರ ಹರ್ಮನ್‌ಪ್ರೀತ್ 39ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ದಾಖಲಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಸಿಮ್ರನ್‌ಜೀತ್ 47ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿದರು.
ಆದರೆ, ಭಾರತ ಕೊನೆಯ ಕ್ಷಣದಲ್ಲಿ ಬೆಲ್ಜಿಯಂಗೆ ಗೋಲು ಬಿಟ್ಟುಕೊಟ್ಟು ಎಡವಿತು. 56ನೇ ನಿಮಿಷದಲ್ಲಿ ಗೋಲು ಬಾರಿಸಿದ ಸೈಮನ್ ಗೌಗ್‌ನಾರ್ಡ್ ಪಂದ್ಯ ಡ್ರಾಗೊಳಿಸಿದರು.
ಈ ಫಲಿತಾಂಶದೊಂದಿಗೆ ಭಾರತ ಸಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಗೋಲು ವ್ಯತ್ಯಾಸದಲ್ಲಿ ಬೆಲ್ಜಿಯಂಗಿಂತ ಮುನ್ನಡೆಯಲ್ಲಿದೆ. ಉಭಯ ತಂಡಗಳು ತಲಾ 1ರಲ್ಲಿ ಡ್ರಾ ಹಾಗೂ ಗೆಲುವು ದಾಖಲಿಸಿವೆ. ‘ಸಿ’ ಗುಂಪಿನಲ್ಲಿರುವ ಎಲ್ಲ ನಾಲ್ಕು ತಂಡಗಳಿಗೆ ನಾಕೌಟ್ ಹಂತಕ್ಕೇರಿರುವ ಸಮಾನ ಅವಕಾಶವಿದೆ.
ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 5-0 ಅಂತರದಿಂದ ಮಣಿಸಿತ್ತು. ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡ ಕೆನಡಾವನ್ನು 2-1 ರಿಂದ ಸೋಲಿಸಿತ್ತು. ಭಾರತ ಡಿ.8ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದ್ದು, ಬೆಲ್ಜಿಯಂ ಅದೇ ದಿನ ದ.ಆಫ್ರಿಕವನ್ನು ಎದುರಿಸಲಿದೆ.
ಭಾರತ ಮೊದಲಾರ್ಧದಲ್ಲಿ ನೀರಸ ಪ್ರದರ್ಶನ ನೀಡಿತ್ತು. ದ್ವಿತೀಯಾ ರ್ಧದಲ್ಲಿ ಎರಡು ಗೋಲುಗಳನ್ನು ಬಾರಿಸಿ ತಿರುಗೇಟು ನೀಡಿತು. ವಿಶ್ವದ ನಂ.3ನೇ ತಂಡ ಬೆಲ್ಜಿಯಂ ವಿಶ್ವದ ನಂ.5ನೇ ತಂಡ ಭಾರತದ ವಿರುದ್ಧ 2013ರಿಂದ ಆಡಿರುವ 19 ಪಂದ್ಯಗಳ ಪೈಕಿ 13ರಲ್ಲಿ ಜಯ ಸಾಧಿಸಿದೆ.







