ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ: ಮಾಣಿಯಲ್ಲಿ ಟ್ರಾಫಿಕ್ ಜಾಮ್

ಬಂಟ್ವಾಳ, ಡಿ.3: ರಸ್ತೆ ಮಧ್ಯೆಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರಕ್ಕೆ ಅಡಚಣೆಯಾದ ಘಟನೆ ಮಾಣಿ ಸಮೀಪದ ಹಳಿರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮುಂಜಾನೆ ಸುಮಾರು ನಾಲ್ಕು ಗಂಟೆಯ ವೇಳೆ ಲಾರಿಯೊಂದರ ಎಕ್ಸಿಲ್ ತುಂಡಾದ ಪರಿಣಾಮ ರಸ್ತೆಮಧ್ಯೆ ಉಳಿದುಕೊಂಡಿದೆ. ಇದರಿಂದ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ರೀತಿಯಲ್ಲಿ ಸಂಚಾರ ಅಡಚಣೆಯಾದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.
ಬಸ್, ಲಾರಿ, ಶಾಲಾ ವಾಹನಗಳು ರಸ್ತೆಯಲ್ಲಿ ಉಳಿದ ಪರಿಣಾಮ ಉದ್ಯೋಗಿಗಳು, ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾದರು. ಮಾಣಿಯಿಂದ ಸೂರಿಕುಮೇರು ಹಾಗೂ ಬುಡೋಳಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುತ್ತಿದ್ದಾರೆ.
Next Story