ನೋಟು ಅಮಾನ್ಯ ಬಳಿಕ ಚುನಾವಣೆಯಲ್ಲಿ ಹಣ ದುರುಪಯೋಗ ಕಡಿಮೆಯಾಗಿಲ್ಲ: ಒ.ಪಿ. ರಾವತ್
ಹೊಸದಿಲ್ಲಿ, ಡಿ.3: ಚುನಾವಣೆಯಲ್ಲಿ ಕಪ್ಪು ಹಣ ದುರುಪಯೋಗ ತಡೆಯಲು ನೋಟು ಅಮಾನ್ಯ ಕ್ರಮ ನಿರೀಕ್ಷಿತ ಪ್ರಮಾಣದಲ್ಲಿ ನೆರವಿಗೆ ಬಂದಿಲ್ಲ. ಕೆಲವು ರಾಜ್ಯಗಳಲ್ಲಿ ಈ ಹಿಂದಿಗಿಂತ ಹೆಚ್ಚು ಜಪ್ತಿ ಮಾಡಲಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಹುದ್ದೆ ತ್ಯಜಿಸಿದ ಎರಡು ದಿನಗಳ ಬಳಿಕ ರಾವತ್ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
‘‘ಗರಿಷ್ಠ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಚುನಾವಣೆಗಳಲ್ಲಿ ಹಣ ದುರುಪಯೋಗವಾಗುವುದು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮುಟ್ಟುಗೋಲು ಹಾಕಿಕೊಂಡ ವಸ್ತುಗಳ ಅಂಕಿ-ಅಂಶಗಳು ಇಂತಹ ನಿರೀಕ್ಷೆಯನ್ನು ಸುಳ್ಳಾಗಿಸಿವೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಕೆಲವು ರಾಜ್ಯಗಳಲ್ಲಿ ಹೆಚ್ಚು ವಸ್ತುಗಳನ್ನು ಜಪ್ತಿ ಮಾಡಲಾಗಿದೆ’’ ಎಂದರು.
ರಾಜಕಾರಣಿಗಳಲ್ಲಿ ಹಣಕ್ಕೆ ಕೊರತೆಯಿಲ್ಲ. ಈ ರೀತಿ ಖರ್ಚು ಮಾಡುವ ಹಣ ಸಾಮಾನ್ಯವಾಗಿ ಕಪ್ಪುಹಣವಾಗಿರುತ್ತದೆ. ಚುನಾವಣೆಯಲ್ಲಿ ಖರ್ಚು ಮಾಡುವ ಕಪ್ಪು ಹಣವನ್ನು ತಪಾಸಣೆ ಮಾಡುವುದಿಲ್ಲ ಎಂದು ರಾವತ್ ಹೇಳಿದ್ದಾರೆ.