ಪಿಣರಾಯಿ ವಿಜಯನ್ ವಿರುದ್ಧದ ಪ್ರತಿಭಟನೆಯ ವಿಡಿಯೋ ಪೋಸ್ಟ್ ಮಾಡಿ ನಗೆಪಾಟಲಿಗೀಡಾದ ಬಿಜೆಪಿ!

ಚೆಂಗನ್ನೂರ್, ಡಿ.3: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ರವಿವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ಕುರಿತಂತೆ ಪಕ್ಷ ಟ್ವೀಟ್ ಮಾಡಿದ ವೀಡಿಯೋವೊಂದು ನಗೆಪಾಟಲಿಗೀಡಾಗಿದ್ದು, ಪೇಚಿಗೀಡಾದ ಬಿಜೆಪಿ ಈ ವೀಡಿಯೋ ಡಿಲೀಟ್ ಮಾಡಿದೆ.
ಶಬರಿಮಲೆ ದೇವಳದ ಸಮೀಪ ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಪಕ್ಷ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಟನೆಗಳ ಭಾಗವಾಗಿ ಅಲಪ್ಪುಳದ ಚೆಂಗನ್ನೂರು ಸಮೀಪ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಭಾಗವಹಿಸಲಿದ್ದ ಸಮಾರಂಭದ ಸ್ಥಳದ ಸಮೀಪ ಬಿಜೆಪಿ ಕಪ್ಪು ಬಾವುಟ ಪ್ರತಿಭಟನೆ ಹಮ್ಮಿಕೊಂಡಿತ್ತು. ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದ ಈ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್ ಕೂಡ ಅಳವಡಿಸಲಾಗಿತ್ತಲ್ಲದೆ ಹಲವಾರು ಪೊಲೀಸರನ್ನೂ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿತ್ತು.
ಆದರೆ ಪ್ರತಿಭಟನೆಯದ್ದೆಂದು ಹೇಳಿಕೊಂಡು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮುಖಾಂತರ ಟ್ವೀಟ್ ಮಾಡಿದ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ನಿರ್ಜನ ರಸ್ತೆಯಲ್ಲಿ ನಡೆಯುತ್ತಿರುವುದು ಹಾಗೂ ಕೊನೆಗೆ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ.
ಈ ವೀಡಿಯೋ ಪ್ರಮಾದದ ಬಗ್ಗೆ ಟ್ವಿಟ್ಟರ್ ತುಂಬೆಲ್ಲಾ ಅಪಹಾಸ್ಯ ವ್ಯಕ್ತವಾಗಿತ್ತಲ್ಲದೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿ ``ಡಿಡ್ ಐ ಮಿಸ್ ಇಟ್ ವೆನ್ ಐ ಬ್ಲಿಂಕ್ಡ್?'' ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಮುಜುಗರಕ್ಕೊಳಗಾದ ಬಿಜೆಪಿ ನಂತರ ಈ ವಿಡಿಯೋ ಡಿಲಿಟ್ ಮಾಡಿದೆ.







