ಬಾಕಿ ವೇತನ ಪಾವತಿಗೆ ಆಗ್ರಹ: ಉಡುಪಿಯಲ್ಲಿ ಬಿಎಸ್ಸೆನ್ನೆಲ್ ಕಾರ್ಮಿಕರಿಂದ ಜಾಥಾ

ಉಡುಪಿ, ಡಿ.3: ಬಾಕಿ ವೇತನ ಶೀಘ್ರ ಪಾವತಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಕಾರ್ಮಿಕರ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಉಡುಪಿ ನಗರದ ದೂರವಾಣಿ ಕೇಂದ್ರದಿಂದ ಆರಂಭಗೊಂಡ ಜಾಥವು ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಡಿಯಾಳಿಯಲ್ಲಿರುವ ಬಿಎಸ್ಸೆನ್ನೆಲ್‌ನ ಉಪಮಹಾಪ್ರಬಂಧಕರ ಕಚೇರಿಯವರೆಗೆ ಸಾಗಿ, ಬಳಿಕ ಉಪ ಮಹಾಪ್ರಬಂಧಕರ ಮೂಲಕ ಮಂಗಳೂರು ದಕ್ಷಿಣ ಕನ್ನಡ ದೂರಪಸಂಪರ್ಕ ಜಿಲ್ಲೆಯ ಮಹಾಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಎಲ್ಲ ದೂರವಾಣಿ ಕೇಂದ್ರದ ಮೊಬೈಲ್ ಟವರ್‌ನಲ್ಲಿ ಹಾಗೂ ದೂರವಾಣಿ ಕಚೇರಿಗಳಲ್ಲಿ ಸುಮಾರು 200 ಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದು, ಇತ್ತೀಚಿನ ಕೆಲವು ತಿಂಗಳುಗಳಿಂದ ಕಾರ್ಮಿಕರಿಗೆ ಸರಿಯಾಗಿ ವೇತನ ನಿಗದಿತ ದಿನಾಂಕದಂದು ಬರುತ್ತಿಲ್ಲ. ಬಡ ಕುಟುಂಬ ಈ ಕಾರ್ಮಿಕರ ಬದುಕು ಈ ಅಲ್ಪ ಮೊತ್ತದ ವೇತನವನ್ನೇ ನಂಬಿ ಸಾಗುತ್ತಿದೆ. ಈಗಿನ ಬೆಲೆ ಏರಿಕೆಯ ದಿನಗಳಲ್ಲಿ ಕುಟುಂಬ ನಿಬಾಯಿಸುವುಗದು ಕಷ್ಟವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಕಾರ್ಮಿಕರಿಗೆ ಕಳೆದೆ ಎರಡು ತಿಂಗಳುಗಳಿಂದ ವೇತನ ಬಾಕಿ ಇದೆ. ಪ್ರತಿ ತಿಂಗಳು ಒಂದು ನಿಗದಿತ ದಿನಾಂಕದಂದು ಸಂಬಳ ನೀಡಬೇಕು. ಪ್ರತಿ ತಿಂಗಳ ಏಳನೇ ತಾರೀಕಿನಂದು ಸಂಬಂಳ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಯೂನಿಯನ್‌ನ ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಕಾರ್ಯ ದರ್ಶಿ ಮೋಹನ್, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ್ ರೈ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಯೂನಿಯನ್ ಮುಖಂಡರಾದ ಶಂಕರ್, ಸತೀಶ್, ಕೃಷ್ಣ ಮೊದ ಲಾದವರು ಉಪಸ್ಥಿತರಿದ್ದರು.