ಮರಳು ಸಮಸ್ಯೆಯನ್ನು ಬಗೆಹರಿಸಲು, ಜನಪರ ಮರಳು ನೀತಿಗಾಗಿ ಆಗ್ರಹಿಸಿ ಧರಣಿ

ಮಂಗಳೂರು, ಡಿ.3: ಕರಾವಳಿ ಜಿಲ್ಲೆಗಳಲ್ಲಿ ಭಾದಿಸಿರುವ ಮರಳು ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಹಾಗೂ ಜನಪರ ಮರಳು ನೀತಿಗಾಗಿ ಆಗ್ರಹಿಸಿ ಸಿಐಟಿಯು ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ಧರಣಿ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಕರಾವಳಿ ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಕೃತಕ ಮರಳು ಅಭಾವವನ್ನು ಸೃಷ್ಟಿಸಿ ಜನಸಾಮಾನ್ಯರ ಬದುಕಿಗೆ ಮಾರಕ ಹೊಡೆತ ನೀಡಲಾಗಿದೆ. ಇದರ ಹಿಂದೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೈವಾಡವಿದೆ. ಇದರಿಂದಾಗಿ ಮರಳು ಮಾಫಿಯಾ ಬೆಳೆದು ಜಿಲ್ಲಾಡಳಿತವನ್ನೇ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದರು.
ಕೃತಕ ಮರಳು ಅಭಾವದಿಂದಾಗಿ ಜಿಲ್ಲೆಯ ಕಟ್ಟಡ ನಿರ್ಮಾಣ ಉದ್ಯಮವು ತೀವ್ರ ಸಂಕಷ್ಟದಲ್ಲಿದ್ದು ಕಟ್ಟಡ ಕಾರ್ಮಿಕರ ಬದುಕಿನ ಬವಣೆಯನ್ನು ಹೇಳತೀರಾದಾಗಿದೆ. ಜನಸಾಮಾನ್ಯರು ಮನೆ ನಿರ್ಮಿಸಲು ಹರಸಾಹಸ ಪಡುವಂತಾಗಿದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವ ಬಗ್ಗೆ ಹಸಿರು ಪೀಠದಲ್ಲಿ ಇತ್ಯಥವಾರ್ಗಬೇಕಾಗಿದೆ. ಆದರೆ 18 ತಿಂಗಳಿನಿಂದ ಹಸಿರು ಪೀಠಕ್ಕೆ ನ್ಯಾಯಾಧೀಶರನ್ನೇ ನೇಮಕ ಮಾಡದೆ ಕೇಂದ್ರ ಸರಕಾರವು ಕರಾವಳಿ ಜಿಲ್ಲೆಗಳಿಗೆ ಘೋರ ಅನ್ಯಾಯವೆಸಗಿದೆ. ಈ ಬಗ್ಗೆ ಚಕಾರ ಶಬ್ದವೆತ್ತದ ಬಿಜೆಪಿ ಜನಪ್ರತಿನಿಧಿಗಳು ಭಜನೆ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ ಸರಕಾರವು ಕೂಡಲೇ ಗಮನಹರಿಸಿ ಜನಪರ ಮರಳು ನೀತಿಯನ್ನು ಜಾರಿಗೊಳಿಸುವ ಮೂಲಕ ನಿಗದಿತ ದರಕ್ಕೆ ಮರಳು ಲಭಿಸುವಂತೆ ಮಾಡಬೇಕು ಹಾಗೂ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕು ಎಂದು ಕೆ. ಮಹಂತೇಶ್ ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಜಪ್ಪಿನಮೊಗರು ಮಾತನಾಡಿ ಹಲವಾರು ವರ್ಷಗಳಿಂದ ಜಿಲ್ಲೆಯ ಜನತೆ ಮರಳು ಅಭಾವದಿಂದ ಕಂಗೆಟ್ಟಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಜನಪ್ರತಿನಿಧಿಗಳು ಎಳ್ಳಷ್ಟೂ ಗಮನ ನೀಡದ ಪರಿಣಾಮವಾಗಿ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು.
ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಮುಖಂಡರಾದ ಯು.ಬಿ.ಲೋಕಯ್ಯ, ಸದಾಶಿವ ದಾಸ್, ಜಯಂತಿ ಬಿ. ಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಜಯಂತ ನಾಯಕ್, ರವಿಚಂದ್ರ ಕೊಂಚಾಡಿ, ರಾಮಣ್ಣ ವಿಟ್ಲ ಮಾತನಾಡಿದರು.
ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ದಿನೇಶ್ ಶೆಟ್ಟಿ, ವಸಂತಿ ಕುಪ್ಪೆಪದವು, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಜಯಶೀಲಾ, ನಾಗರಾಜ್ ಸುಳ್ಯ, ಶಂಕರ ವಾಲ್ಪಾಡಿ ವಹಿಸಿದ್ದರು.