ವಿಕಲಚೇತನ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಸ್ಥಾಪನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು, ಡಿ.3: ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಮಾದರಿಯಲ್ಲಿಯೆ ವಿಕಲಚೇತನ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು ತೆರೆಯಲು ಮುಂದಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಅನುಕಂಪ ಬೇಕಿಲ್ಲ. ಅವರ ಪ್ರತಿಭೆಗೆ ಸೂಕ್ತವಾದಂತಹ ಪ್ರೋತ್ಸಾಹದ ಅಗತ್ಯವಿದೆ. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ರಾಜ್ಯದ ವಿಕಲಚೇತನ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ವಿಕಲಚೇತನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಜ್ಯಾದ್ಯಂತ ವಸತಿ ಶಾಲೆಗಳನ್ನು ತೆರೆಯಲು ಚಿಂತನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ವಿಕಲಚೇತನ ಪುನರ್‌ವಸತಿ ಕಾರ್ಯಕರ್ತರಿಗೆ ಈಗ ಕೊಡುತ್ತಿರುವ 6.500ರೂ.ಗೌರವ ಧನವನ್ನು 10ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಒತ್ತಾಯ ಕೇಳಿಬಂದಿದೆ. ಇದು ಸೇರಿದಂತೆ ಈಗಾಗಲೆ ವಿಕಲಚೇತನರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಜಯಮಾಲಾ ಮಾತನಾಡಿ, ರಾಜ್ಯದಲ್ಲಿ 21ಬಗೆಯ ವಿಕಲಚೇತನರನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಒಂದು ಬಗೆಯ ಅಂಗವಿಕಲತೆಗೂ ಮತ್ತೊಂದು ಬಗೆಯ ಅಂಗವಿಕಲತೆಗೂ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಎಲ್ಲರನ್ನು ಪ್ರತ್ಯೇಕವಾಗಿಯೆ ಗಮನಿಸಿ, ಸೂಕ್ತ ಸಹಕಾರ ಹಾಗೂ ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ರೋಣಾ ತಾಲೂಕಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ‘ಮಲ್ಲಕಂಬ’ ಪ್ರದರ್ಶನ ವೀಕ್ಷಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಪರಿಷತ್‌ನ ಶಾಸಕ ಶರವಣ ಮತ್ತಿತರರಿದ್ದರು.







