ಹೊಸದಿಲ್ಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ: ಕೇಂದ್ರ ಮಂಡಳಿ

ಹೊಸದಿಲ್ಲಿ, ಡಿ.3: ಸ್ಥಳೀಯ ಮಾಲಿನ್ಯಕಾರಕಗಳ ಪರಿಣಾಮವಾಗಿ ದಿಲ್ಲಿಯ ಗುಣಮಟ್ಟವು ಸೋಮವಾರ ಕಳಪೆ ಮತ್ತು ಅತ್ಯಂತ ಕಳಪೆಯ ಮಧ್ಯೆಯಿದ್ದು, ಮುಂದೆ ಮಾಲಿನ್ಯ ಮಟ್ಟವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟವು ಅತ್ಯಂತ ಕಳಪೆಯಾಗಿದ್ದು ಸದ್ಯ ದಿಲ್ಲಿಯ ಹೊರಭಾಗದಿಂದ ಹರಡುತ್ತಿರುವ ಮಾಲಿನ್ಯಕಾರಕಗಳ ಪ್ರಮಾಣವು ಅತ್ಯಂತ ಕನಿಷ್ಟವಾಗಿದೆ ಎಂದು ಕೇಂದ್ರ ಪ್ರಾಯೋಜಿತ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ನೆಚ್ಚರಿಕೆ ವ್ಯವಸ್ಥೆ (ಸಫರ್) ತಿಳಿಸಿದೆ.
ದಿಲ್ಲಿಯ ಮಾಲಿನ್ಯ ಮಟ್ಟದ ಮೇಲೆ ಸ್ಥಳೀಯ ಮಾಲಿನ್ಯಕಾರಕಗಳಿಂದ ಉಂಟಾಗುವ ಪರಿಣಾಮವನ್ನು ತಿಳಿಯಲು ಈ ಸಮಯವು ಅತ್ಯಂತ ಪ್ರಶಸ್ತವಾಗಿದೆ ಎಂದು ಸಫರ್ ತಿಳಿಸಿದೆ. ಸ್ಥಳೀಯ ಮಾಲಿನ್ಯಕಾರಕಗಳಲ್ಲಿ ವಾಹನಗಳ ಹೊಗೆ, ಕಟ್ಟಡ ಕಾಮಗಾರಿಗಳು ಮತ್ತು ತ್ಯಾಜ್ಯ ಸುಡುವಿಕೆ ಇತ್ಯಾದಿ ಸೇರಿದೆ. ವಾಹನಗಳು ಹೊರಸೂಸುವ ಹೊಗೆಯು ದಿಲ್ಲಿಯ ಮಾಲಿನ್ಯಕ್ಕೆ ಶೇ.40 ಕಾಣಿಕೆ ನೀಡುತ್ತಿದೆ ಎಂದು ಮಂಡಳಿ ತಿಳಿಸಿದೆ. ಸಿಪಿಸಿಬಿಯು ಒಟ್ಟಾರೆ 314 ಎಕ್ಯೂಐ ದಾಖಲಿಸಿದೆ. ಇದು ಅತ್ಯಂತ ಕಳಪೆ ವಾಯು ಗುಣಮಟ್ಟವನ್ನು ತೋರಿಸುತ್ತದೆ. ರಾಷ್ಟ್ರ ರಾಜಧಾನಿಯ 19 ಕಡೆಗಳಲ್ಲಿ ವಾಯು ಗುಣಮಟ್ಟವು ಅತ್ಯಂತ ಕಳಪೆಯಾಗಿದ್ದರೆ ಆರು ಕಡೆಗಳಲ್ಲಿ ಕಳಪೆಯಾಗಿದೆ ಎಂದು ಮಂಡಳಿ ತಿಳಿಸಿದೆ.