ವಿಕಚೇತನರಿಗೆ ಸಮಾಜ ದಾರಿ ದೀಪವಾಗಬೇಕು-ಸಂಜೀವ ಮಠಂದೂರು
ವಿಶ್ವ ಅಂಗವಿಕಲರ ದಿನಾಚರಣೆ

ಪುತ್ತೂರು, ಡಿ. 3: ಅಂಗವಿಕಲ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಅವರು ಸ್ವಾಭಿಮಾನದಿಂದ ಬದುಕಲು ಸಮಾಜ ದಾರಿದೀಪವಾಗಬೇಕು. ಅವರು ಮಾನಸಿಕವಾಗಿ ಸ್ಥಿರತೆ ಪಡೆದುಕೊಂಡು ಮುಖ್ಯವಾಹಿನಿಯಲ್ಲಿ ಒಂದಾಗುವುದು ಅಗತ್ಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ನೆಲ್ಲಿಕಟ್ಟೆ ಬಿಆರ್‍ಸಿ ಕೇಂದ್ರದಲ್ಲಿ ಸೋಮವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಪರಿಸರ ನಿರ್ಮಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಮ್ಮ ಜತೆ ನಾವಿದ್ದೇವೆ ಎಂದು ಅಂಗವಿಕಲ ಮಕ್ಕಳಿಗೆ ಭರವಸೆ ತುಂಬುವ ಜವಾಬ್ದಾರಿ ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ಸಮಾಜಕ್ಕಿದೆ. ಹೆತ್ತವರು ಈ ಮಕ್ಕಳಿಗೆ ಮಾತೃವಾತ್ಸಲ್ಯದ ಜತೆಗೆ ಬದುಕು ನೀಡುವ ಕೆಲಸವನ್ನು ಮಾಡಬೇಕು ಎಂದ ಅವರು ವರ್ಷಕ್ಕೆ 2 ವಿಕಲ ಚೇತನ ಮಕ್ಕಳಿಗೆ ಪೂರಕ ವಾಹನವನ್ನು ಮತ್ತು ಕೃತಕ ಸಲಕರಣೆಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಉದ್ಘಾಟಿಸಿ ಶುಭ ಹಾರೈಸಿದರು. ಎಂ.ಕಾಂ. ಪದವಿ ಪಡೆದು ವಿಶೇಷ ಸಾಧನೆ ಮಾಡಿರುವ ವಿಕಲಚೇತನೆ ನೇಹಾ ರೈ ಮಾತನಾಡಿ, ನಮಗೆ ಯಾರ ಅನುಕಂಪವೂ ಬೇಡ. ಪ್ರೋತ್ಸಾಹ ಕೊಡಿ ಸಾಕು. ಹೆತ್ತವರು ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ನಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲಾ ಮಕ್ಕಳಂತೆ ವಿಕಲಚೇತನ ಮಕ್ಕಳಿಗೂ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್. ಸುಕನ್ಯ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ವೈದ್ಯಾಧಿಕಾರಿ ಡಾ. ಸುಹೀಲಾ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಮರಿಯಮ್ಮ, ತಾರಾನಾಥ, ತನುಜಾ, ಸೀತಮ್ಮ ಉಪಸ್ಥಿತರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಮೋನಪ್ಪ ಸ್ವಾಗತಿಸಿದರು. ಡಾ. ಶಿವರಾಮ ಕಾರಂತ ಶಾಲೆಯ ವಿದ್ಯಾರ್ಥಿನಿ ರಶ್ಮಿ ವಂದಿಸಿದರು. ಇರ್ದೆ ಉಪ್ಪಳಿಗೆ ಶಾಲೆಯ ವಿದ್ಯಾರ್ಥಿನಿ ರಚನಾ ನಿರೂಪಿಸಿದರು.