ವಿಜಯಪುರ: ಪ್ರೀತಿ ನಿರಾಕರಿಸಿದ ಅಪ್ರಾಪ್ತೆಯ ಬೆಂಕಿ ಹಚ್ಚಿ ಹತ್ಯೆ; ಆರೋಪಿಗಳಿಬ್ಬರ ಬಂಧನ

ವಿಜಯಪುರ, ಡಿ. 3: ಪ್ರೀತಿ ನಿರಾಕರಿಸಿ, ಆ ವಿಚಾರವನ್ನು ಪೋಷಕರಿಗೆ ತಿಳಿಸಿದ್ದರಿಂದ ಕುಪಿತರಾದ ವಿವಾಹಿತ ಮತ್ತು ಯುವಕನೊಬ್ಬ ಅಪ್ರಾಪ್ತೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಹತ್ಯೆಗೈದ ಘಟನೆ ಜಿಲ್ಲೆಯ ತ್ರಿಕೋಟಾದ ರತ್ನಾಪುರದಲ್ಲಿ ನಡೆದಿದೆ.
ಕೊಲೆಯಾದ ಅಪ್ರಾಪ್ತೆಯನ್ನು ರತ್ನಾಪುರ ಗ್ರಾಮದ ಪ್ರಾಜಕ್ತಾ ಬಲಭೀಮ ನರಳೆ(14) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಗಳನ್ನು ರತ್ನಾಪುರ ಗ್ರಾಮದ ವಿವಾಹಿತರಾದ ಶಂಕರ ಹಿಪ್ಪರಕರ(24) ಹಾಗೂ ಮೋಹನ್ ಎಡವೆ(19) ಎಂದು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೊತ್ತಾಗಿದೆ.
ಆರೋಪಿಗಳಿಬ್ಬರು ಬಾಲಕಿಯನ್ನು ಬೆನ್ನತ್ತಿ ಪ್ರೀತಿಸುವಂತೆ ಪೀಡಿಸುತ್ತಿದ್ದರು. ಆದರೆ, ಬಾಲಕಿ ಪ್ರೀತಿ ನಿರಾಕರಿಸಿದ್ದು, ಆ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಹೀಗಾಗಿ ಪೋಷಕರು ಬಾಲಕಿಯನ್ನು ಶಾಲೆ ಬಿಡಿಸಿ ಮನೆಯಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ.
ಇದರಿಂದ ಕುಪಿತರಾದ ಇಬ್ಬರು ಆರೋಪಿಗಳು ರವಿವಾರ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ತೀವ್ರ ಸುಟ್ಟ ಗಾಯಗಳಿಂದ ಬಾಲಕಿ ಅಸುನೀಗಿದ್ದಾಳೆ ಎಂದು ಗೊತ್ತಾಗಿದೆ.
ಈ ಪ್ರಕರಣ ಸಂಬಂಧ ವಿಜಯಪುರ ಜಿಲ್ಲೆಯ ತ್ರಿಕೋಟಾ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.







