22 ‘ನಕಲಿ ಎನ್‌ಕೌಂಟರ್’: ತನಿಖಾ ವರದಿಗೆ ಪ್ರತಿಕ್ರಿಯಿಸುವಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಡಿ. 3: ನರೇಂದ್ರ ಮೋದಿ ಅವರು ಮುಖ್ಯ ಮಂತ್ರಿ ಆಗಿದ್ದ ಸಂದರ್ಭ 2002 ಹಾಗೂ 2006ರ ನಡುವೆ ಗುಜರಾತ್‌ನಲ್ಲಿ ನಡೆದ 22 ನಕಲಿ ಎನ್‌ಕೌಂಟರ್ ಬಗೆಗಿನ ತನಿಖಾ ವರದಿಗೆ ಪ್ರತಿಕ್ರಿಯೆಯಾಗಿ ಅಫಿದಾವಿತ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಸರಕಾರಕ್ಕೆ ನಿರ್ದೇಶಿಸಿದೆ.
ಎನ್‌ಕೌಂಟರ್ ಕುರಿತು ತನಿಖೆ ನಡೆಸುವಂತೆ ಕೋರಿ ಪತ್ರಕರ್ತರಾದ ಬಿ.ಜಿ. ವರ್ಗೀಸ್ ಹಾಗೂ ಗೀತ ರಚನೆಕಾರ ಜಾವೇದ್ ಅಖ್ತರ್ 2007ರಲ್ಲಿ ಮನವಿ ಸಲ್ಲಿಸಿದ್ದರು. ವರ್ಗೀಸ್ ಅವರ ಮನವಿಯಲ್ಲಿ 21 ಹಾಗೂ ಅಖ್ತರ್ ಅವರ ಮನವಿಯಲ್ಲಿ 1 ನಕಲಿ ಎನ್‌ಕೌಂಟರ್ ಬಗ್ಗೆ ಉಲ್ಲೇಖಿಸಲಾಗಿತ್ತು. ವರ್ಗೀಸ್ ಅವರು 2014 ಡಿಸೆಂಬರ್‌ನಲ್ಲಿ ನಿಧನರಾಗಿದ್ದರು.
ಈ ಎನ್‌ಕೌಂಟರ್‌ಗಳ ತನಿಖೆ ನಡೆಸಲು ಸುಪ್ರೀಂ ಕೋರ್ಟ್ 2012ರಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಬೇಡಿ ನೇತೃತ್ವದಲ್ಲಿ ಪರಿವೀಕ್ಷಣಾ ಸಮಿತಿ ರೂಪಿಸಿತ್ತು. ಬೇಡಿ ಅವರಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಮೋದಿ ನೇತೃತ್ವದ ಗುಜರಾತ್ ಸರಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ಭಯೋತ್ಪಾದಕರೆಂದು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿರಿಸಿ ಈ ಎನ್‌ಕೌಂಟರ್ ನಡೆಸಿರುವಂತೆ ಕಾಣುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಸಮಿತಿಗೆ ಸೂಚಿಸಿತ್ತು. ಬೇಡಿ ಸಮಿತಿ ಈಗಾಗಲೇ ವರದಿ ಸಲ್ಲಿಸಿದೆ ಎಂದು ಈ ವರ್ಷ ‘ದಿ ಪ್ರಿಂಟ್’ ವರದಿ ಮಾಡಿದೆ ಎಂದು ನ್ಯಾಯಾಲಯದಲ್ಲಿ ಸೋಮವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದರು.
ವರದಿಯನ್ನು ಬಹಿರಂಗಗೊಳಿಸಿರುವುದರ ಬಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. ಕ್ರಿಸ್‌ಮಸ್ ಬಳಿಕ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶವನ್ನು ಮೆಹ್ತಾ ಕೋರಿದರು. ಆದರೆ, ಸುಪ್ರೀಂ ಕೋರ್ಟ್ ವರದಿ ಬಗ್ಗೆ ಅಫಿದಾವಿತ್ ಸಲ್ಲಿಸಲು ಕೇವಲ 7 ದಿನಗಳ ಕಾಲಾವಕಾಶ ಮಾತ್ರ ನೀಡಿತು.







