ರಿಲಯನ್ಸ್ ವಿರುದ್ಧ ಕ್ರಮ : ನೌಕಾಪಡೆ ಮುಖ್ಯಸ್ಥ

ಹೊಸದಿಲ್ಲಿ, ಡಿ.3: ಸಮುದ್ರದ ಗಸ್ತು ಹಡಗುಗಳನ್ನು ನಿಗದಿತ ಅವಧಿಗಿಂತ ವಿಳಂಬವಾಗಿ ತಲುಪಿಸಿದ ರಿಲಯನ್ಸ್ ನೇವಲ್ ಆ್ಯಂಡ್ ಇಂಜಿನಿಯರಿಂಗ್ ಲಿ.(ಆರ್‌ಎನ್‌ಇಎಲ್) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಐದು ಗಸ್ತು ಹಡಗುಗಳನ್ನು ಪೂರೈಸುವ ಗುತ್ತಿಗೆ ಪಡೆದಿರುವ ಆರ್‌ಎನ್‌ಇಎಲ್, ಇವನ್ನು 2015ರ ಆರಂಭದಲ್ಲಿ ತಲುಪಿಸಬೇಕಿತ್ತು. ಆದರೆ ಸಂಸ್ಥೆ 2018ರ ಜುಲೈಯಲ್ಲಿ 2 ಹಡಗುಗಳನ್ನು ತಲುಪಿಸಿದೆ. ಈ ನಿಟ್ಟಿನಲ್ಲಿ ಸಂಸ್ಥೆ ನೀಡಿರುವ ಬ್ಯಾಂಕ್ ಖಾತರಿಯನ್ನು ನಗದೀಕರಿಸಲಾಗಿದೆ. ರಿಲಯನ್ಸ್ ಸಮೂಹ ಸಂಸ್ಥೆಗೆ ಯಾವುದೇ ಆದ್ಯತೆ ಅಥವಾ ವಿಶೇಷ ವಿನಾಯಿತಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೌಕಾಪಡೆಗೆ ಸಮುದ್ರ ಗಸ್ತು ಹಡಗುಗಳನ್ನು ಒದಗಿಸುವ 2,500 ಕೋಟಿ ರೂ. ಮೊತ್ತದ ಗುತ್ತಿಗೆಯನ್ನು 2011ರಲ್ಲಿ ಪಿಪವಾವ್ ಡಿಫೆನ್ಸ್ ಸಂಸ್ಥೆ ವಹಿಸಿಕೊಂಡಿದ್ದು ಬಳಿಕ ಇದನ್ನು ರಿಲಯನ್ಸ್ ಸಂಸ್ಥೆ ಪಡೆದುಕೊಂಡಿತ್ತು. ಸಂಸ್ಥೆಯ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಆದರೆ ಗುತ್ತಿಗೆಯನ್ನು ರದ್ದುಗೊಳಿಸಲಾಗಿಲ್ಲ. ಮುಂದಿನ ಕ್ರಮದ ಬಗ್ಗೆ ಶೀಘ್ರ ನಿರ್ಧರಿಸಲಾಗುವುದು ಎಂದು ಲಾಂಬಾ ತಿಳಿಸಿದ್ದಾರೆ.





