ಸಿಟ್ ಸದಸ್ಯರು ಸಿಖ್ ವಿರೋಧಿ ದಂಗೆ ಪ್ರಕರಣಗಳ ತನಿಖೆಯ ಉಸ್ತುವಾರಿ ಮುಂದುವರಿಸಬಹುದು
ಸರ್ವೋಚ್ಚ ನ್ಯಾಯಾಲಯಕ್ಕೆ ಸರಕಾರದ ಹೇಳಿಕೆ

ಹೊಸದಿಲ್ಲಿ, ಡಿ.3: 1984ರ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದಂತೆ ಮುಕ್ತಾಯ ವರದಿಗಳು ಸಲ್ಲಿಕೆಯಾಗಿದ್ದ 186 ಪ್ರಕರಣಗಳಲ್ಲಿ ಇನ್ನಷ್ಟು ತನಿಖೆಯ ಉಸ್ತುವಾರಿಯನ್ನು ಹೊಂದಿರುವ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಸಿಟ್)ದಲ್ಲಿ ಮುಂದುವರಿಯಲು ವೈಯಕ್ತಿಕ ಕಾರಣಗಳಿಂದ ನಿರಾಕರಿಸಿರುವ ನಿವೃತ್ತ ಐಪಿಎಸ್ ಅಧಿಕಾರಿ ರಾಜದೀಪ್ ಸಿಂಗ್ ಅವರ ಬದಲಿಗೆ ಇನ್ನೋರ್ವ ಸದಸ್ಯರನ್ನು ನೇಮಕಗೊಳಿಸುವುದು ಅಗತ್ಯವಲ್ಲದಿರಬಹುದು ಎಂದು ಕೇಂದ್ರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಸಿಟ್‌ನ ಇತರ ಇಬ್ಬರು ಸದಸ್ಯರಾಗಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಸ್.ಎನ್.ಧಿಂಗ್ರಾ ಮತ್ತು ಹಾಲಿ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿ ಅಭಿಷೇಕ್ ದುಲಾರ್ ಅವರು ಉಸ್ತುವಾರಿಯನ್ನು ಮುಂದುವರಿಸಲು ತನ್ನ ಆಕ್ಷೇಪವಿಲ್ಲ ಎಂದು ಸರಕಾರವು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠಕ್ಕೆ ತಿಳಿಸಿತು.
ಆದರೆ ಮೂವರು ಸದಸ್ಯರ ಸಿಟ್ ರಚನೆಯ ಜ.11ರ ಆದೇಶವನ್ನು ಮೂವರು ನ್ಯಾಯಾಧೀಶರ ಪೀಠವು ಹೊರಡಿಸಿರುವುದರಿಂದ ಇಬ್ಬರು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಪರಿಷ್ಕರಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳಿತು.
ಸಿಂಗ್ ಜಾಗಕ್ಕೆ ಮಾಜಿ ಐಪಿಎಸ್ ಅಧಿಕಾರಿ ನವನೀತ ರಾಜನ್ ವಾಸನ್ ಅವರುನ್ನು ನೇಮಕಗೊಳಿಸುವಂತೆ ಸರಕಾರವು ಸಲಹೆ ನೀಡಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು ಪೀಠಕ್ಕೆ ತಿಳಿಸಿದಾಗ,ನೀವು ನಿಮ್ಮದೇ ಆದ ನ್ಯಾಯಾಧೀಶರನ್ನು ನೇಮಕಗೊಳಿಸುವಂತಿಲ್ಲ. 2-3 ಹೆಸರುಗಳನ್ನು ನೀಡಿ ಎಂದು ಅದು ಪ್ರತಿಕ್ರಿಯಿಸಿತು. ಈ ಹಂತದಲ್ಲಿ ಆನಂದ್ ಅವರು ಸರ್ವೋಚ್ಚ ನ್ಯಾಯಾಲಯವು ಸಿಂಗ್ ಬದಲಿಗೆ ಯಾರನ್ನೂ ನೇಮಕಗೊಳಿಸಬಹುದು ಎಂದು ತಿಳಿಸಿದರು.
ಸಿಟ್‌ಗೆ ಇನ್ನೋರ್ವ ಸದಸ್ಯರ ನೇಮಕಾತಿ ಪ್ರಕ್ರಿಯೆಯು ವಿಳಂಬಗೊಳ್ಳಬಹುದು ಹೀಗಾಗಿ ಇತರ ಇಬ್ಬರು ಸದಸ್ಯರು ಉಸ್ತುವಾರಿ ಕಾರ್ಯವನ್ನು ಮುಂದುವರಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ,ಆನಂದ್ ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.







