ಆ್ಯಂಬಿಡೆಂಟ್ ವಂಚನೆ ಪ್ರಕರಣ: ಇಬ್ಬರು ವಿಶೇಷ ಅಭಿಯೋಜಕರ ನೇಮಕ
ಬೆಂಗಳೂರು, ನ.3: ಆ್ಯಂಬಿಡೆಂಟ್ ಚಿಟ್ ಫಂಡ್ ಕಂಪೆನಿ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳ ವಂಚನೆ ಪ್ರಕರಣಗಳಲ್ಲಿ ತನ್ನ ಪರ ವಾದಿಸಲು ಸರಕಾರ ಇಬ್ಬರು ವಿಶೇಷ ಅಭಿಯೋಜಕರನ್ನು ನೇಮಿಸಿದೆ.
ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಹಾಗೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪರ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಅವರನ್ನು ವಿಶೇಷ ಅಭಿಯೋಜಕರಾಗಿ ನೇಮಿಸಲಾಗಿದೆ. ಈ ಇಬ್ಬರೂ ವಕೀಲರು ಆ್ಯಂಬಿಡೆಂಟ್ ಚಿಟ್ ಫಂಡ್ ಕಂಪೆನಿ, ಇಂಜಾಸ್ ಮಿನಾ ಇನ್ವೆಸ್ಟ್‌ಮೆಂಟ್ ಕಂಪೆನಿ, ಮಂಜಾರಿಯಾ ಸೇರಿದಂತೆ ಒಟ್ಟು 21 ಕಂಪೆನಿಗಳ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣಗಳಲ್ಲಿ ಸರಕಾರದ ಪರ ಅಧೀನ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ವಾದ ಮಂಡಿಸಲಿದ್ದಾರೆ.
ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಪರಿಣಿತಿ ಹೊಂದಿರುವ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಈಗಾಗಲೇ ಸರಕಾರವನ್ನು ಹಲವು ಸಂಕಷ್ಟಗಳಲ್ಲಿ ಕಾನೂನಿನ ಪೆಟ್ಟಿನಿಂದ ರಕ್ಷಿಸಿದ್ದಾರೆ. ಅದೇ ರೀತಿ ವಕೀಲ ಜಗದೀಶ್ ಕೂಡ ಎಸಿಬಿ ದಾಖಲಿಸಿರುವ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಡಿ.3ರಂದು ಸರಕಾರ ಈ ಇಬ್ಬರೂ ವಕೀಲರನ್ನು ಸಾರ್ವಜನಿಕರನ್ನು ಹೂಡಿಕೆ ಹೆಸರಲ್ಲಿ ವಂಚಿಸಿರುವ ಕಂಪೆನಿಗಳ ವಿರುದ್ಧ ವಾದ ಮಂಡಿಸಲಿಕ್ಕಾಗಿ ನೇಮಿಸಿ ಆದೇಶ ಹೊರಡಿಸಿರುವುದು ವಂಚಕ ಸಂಸ್ಥೆಗಳ ಮಾಲಕರಲ್ಲಿ ನಡುಕ ಹುಟ್ಟಿಸಿದೆ.







