ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳೇ ಉತ್ತಮ: ಕೇರಳ ಸಚಿವ

ತಿರುವನಂತಪುರಂ, ಡಿ.3: ಶಬರಿಮಲೆ ದೇವಸ್ಥಾನದ ತಂತ್ರಿಗಳ ವಿರುದ್ಧ ಹರಿಹಾಯ್ದಿರುವ ಕೇರಳದ ಲೋಕೋಪಯೋಗಿ ಸಚಿವ , ಸಿಪಿಎಂ ಮುಖಂಡ ಜಿ.ಸುಧಾಕರನ್, ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಕತ್ತೆಗಳು ಹೆಚ್ಚು ವಿನಯಶೀಲವಾಗಿದೆ ಎಂದಿದ್ದಾರೆ.
ಕಟು ನುಡಿಗಳಿಗೆ ಹೆಸರಾಗಿರುವ ಸುಧಾಕರನ್ ಅಳಪ್ಪುಝದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಶಬರಿಮಲೆ ದೇವಸ್ಥಾನದಲ್ಲಿ ತಂತ್ರಿಗಳಿಗಿಂತ ಹೆಚ್ಚು ಸೇವೆಯನ್ನು ಕತ್ತೆಗಳು ಮಾಡುತ್ತವೆ. ಆದರೂ ಇದುವರೆಗೂ ಕತ್ತೆಗಳು ಯಾವುದೇ ಪ್ರತಿಭಟನೆ ನಡೆಸಿಲ್ಲ. ಕಠಿಣ ದುಡಿಮೆಯ ಬಳಿಕ ಅವುಗಳು ಪಂಬಾ (ಪಂಪಾ) ನದಿಯ ಬಳಿ ವಿಶ್ರಾಂತಿ ಪಡೆಯುತ್ತವೆ ಎಂದು ಸುಧಾಕರನ್ ಹೇಳಿದ್ದಾರೆ.
ಶಬರಿಮಲೆಯಲ್ಲಿ ಪಂಬಾದ ಬಳಿಯಿರುವ ಮೂಲಶಿಬಿರದಿಂದ ದೇವಸ್ಥಾನಕ್ಕೆ ಸರಕುಗಳನ್ನು ಸಾಗಿಸಲು ಕತ್ತೆಗಳ ಸೇವೆಯನ್ನು ಬಳಸಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 10ರಿಂದ 50ರ ವಯೋಮಾನದ ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದರೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತೇವೆ ಎಂದು ಶಬರಿಮಲೆ ತಂತ್ರಿಗಳ ಕುಟುಂಬದವರು ಎಚ್ಚರಿಕೆ ನೀಡಿದಂದಿನಿಂದ ಸಚಿವ ಸುಧಾಕರನ್ ಶಬರಿಮಲೆ ತಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಟರಾರು ಕುಟುಂಬದವರು ಶಬರಿಮಲೆಯಲ್ಲಿ ತಾಂತ್ರಿಕ ವಿಧಿಯನ್ನು ನಡೆಸುವ ಹಕ್ಕನ್ನು ಹೊಂದಿದ್ದು ಈಗ ಕಂಟರಾರು ರಾಜೀವರು ಮುಖ್ಯ ತಂತ್ರಿ(ಪುರೋಹಿತ)ಗಳಾಗಿದ್ದಾರೆ.







