ಕೇರಳ ವಿಧಾನಸಭೆಯಲ್ಲಿ ಗದ್ದಲ: ಯುಡಿಎಫ್ ಶಾಸಕರ ಉಪವಾಸ ಸತ್ಯಾಗ್ರಹ
ತಿರುವನಂತಪುರಂ, ಡಿ.3: ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದ ವಿಧಾನಸಭೆ ಯ ಕಲಾಪ ಸತತ ನಾಲ್ಕನೇ ದಿನವಾದ ಸೋಮವಾರವೂ ಗದ್ದಲಮಯವಾಗಿದ್ದು, ಅರ್ಧಗಂಟೆಯಲ್ಲೇ ಸದನದ ಕಲಾಪವನ್ನು ಮುಂದೂಡಲಾಯಿತು. ಶಬರಿಮಲೆ ವಿಷಯದ ಬಗ್ಗೆ ಸರಕಾರದ ನಿಲುವನ್ನು ಖಂಡಿಸಿ ಹಲವು ಯುಡಿಎಫ್ ಶಾಸಕರು ಹಾಗೂ ಬಿಜೆಪಿ ನಾಯಕರೊಬ್ಬರು ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಶಬರಿಮಲೆ ವಿಷಯದ ಬಗ್ಗೆ ಗದ್ದಲ ಆರಂಭವಾಯಿತು. ಶಬರಿಮಲೆಯಲ್ಲಿ ಜಾರಿಯಲ್ಲಿರುವ ಸೆಕ್ಷನ್ 144ನ್ನು ಹಿಂಪಡೆಯಬೇಕೆಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದರು. ಶಬರಿಮಲೆ, ಪಂಬಾ ಮತ್ತು ನಿಲಕ್ಕಲ್‌ಗೆ ಆಗಮಿಸುವ ಯಾತ್ರಿಗಳಿಗೆ ಹೆಚ್ಚಿನ ಸವಲತ್ತು ಒದಗಿಸುವಂತೆ ಅವರು ಸರಕಾರವನ್ನು ಆಗ್ರಹಿಸಿದರು. ಕಳೆದ ನಾಲ್ಕು ದಿನಗಳಿಂದ ವಿಪಕ್ಷ ಈ ಬೇಡಿಕೆಯನ್ನು ಮುಂದಿರಿಸಿದ್ದರೂ ಸರಕಾರ ಈ ಬಗ್ಗೆ ಚರ್ಚೆಗೆ ಸಿದ್ದವಿಲ್ಲ. ಆದ್ದರಿಂದ ಸದನದಲ್ಲಿ ಈ ವಿಷಯವನ್ನು ಎತ್ತಿದ್ದು ಸದನದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಕಾಂಗ್ರೆಸ್ ಸ್ಪೀಕರ್ ಜೊತೆ ಸಹಕರಿಸಲಿದೆ ಎಂದು ಪ್ರಶ್ನೋತ್ತರ ಅವಧಿಯ ಆರಂಭದಲ್ಲಿ ಹೇಳಿದ್ದ ಚೆನ್ನಿತ್ತಲ, ಬಳಿಕ ಮಾತು ಬದಲಿಸಿದರು. ಶಬರಿಮಲೆ ನಗರದಲ್ಲಿ ಕಾಂಗ್ರೆಸ್ ಮುಂದಿರಿಸಿದ ಬೇಡಿಕೆಗಳನ್ನು ತಿರಸ್ಕರಿಸಿರುವ ಸರಕಾರದ ಕ್ರಮವನ್ನು ವಿರೋಧಿಸಿ ಪಕ್ಷದ ಮೂವರು ಶಾಸಕರು ವಿಧಾನಸಭೆಯ ಮುಖ್ಯದ್ವಾರದ ಎದುರು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಿಜಯನ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಬಿಜೆಪಿ ಸಚಿವಾಲಯದ ಎದುರು ಧರಣಿ ನಡೆಸಿದರೆ, ಕಾಂಗ್ರೆಸ್ ಇಲ್ಲಿ ಆರಂಭಿಸಿದೆ. ಇದು ನೀವು(ಕಾಂಗ್ರೆಸಿಗರು) ಬಿಜೆಪಿ/ಆರೆಸ್ಸೆಸ್‌ನೊಂದಿಗೆ ಹೊಂದಿರುವ ಸಂಬಂಧವನ್ನು ಸ್ಪಷ್ಟಪಡಿಸಿದೆ ಎಂದು ತಿರುಗೇಟು ನೀಡಿದರು.