ಇಸ್ಲಾಮ್ ಬಗ್ಗೆ ಅವಹೇಳನಕಾರಿ ಭಾಷಣ: ಖಂಡನೆ
ಉಡುಪಿ, ಡಿ.3: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಉಡುಪಿಯಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ವಿಎಚ್‌ಪಿ ಮುಖಂಡ ರಾದ ರಾಘುವಲು ಮತ್ತು ಮಂಜುನಾಥ ಸ್ವಾಮಿ ಇಸ್ಲಾಮ್ ಧರ್ಮ ಹಾಗೂ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದಾರೆ.
ಇವರ ಭಾಷಣದ ರೀತಿ ನೋಡುವಾಗ ಇವರ ಕಾರ್ಯಕ್ರಮದ ಉದ್ದೇಶ ರಾಮಮಂದಿರ ನಿರ್ಮಾಣವೇ ಅಥವಾ ಕೇವಲ ಮುಸ್ಲಿಂ ಸಮುದಾಯವನ್ನು ಹೀಯಾಳಿಸುವುದೇ ಎಂಬುದನ್ನು ಕಾರ್ಯಕ್ರಮದ ಆಯೋಜಕರು ಸ್ಪಷ್ಟಪಡಿಸ ಬೇಕಾಗಿದೆ. ಈ ಕಾರ್ಯಕ್ರಮ ಸೇರಿದಂತೆ ಹಿಂದೂ ಧರ್ಮದ ಎಲ್ಲ ಕಾರ್ಯ ಕ್ರಮಗಳಿಗೆ ಉಡುಪಿ ಜಿಲ್ಲಾ ಸಮಸ್ತ ಮುಸ್ಲಿಂಮರ ಹೆಸರಿನಲ್ಲಿ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡುವ ಮೂಲಕ ಹಿಂದೂ ಸಹೋದರರ ಸೇವೆಯನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಕೆಲವು ಅವಿವೇಕಿಗಳ ಮಾತುಗಳಿಂದ ಜಿಲ್ಲೆಯ ಸೌಹಾರ್ದತೆ ಕೆಡುತ್ತಿದೆ. ಇವರ ಈ ಹೇಳಿಕೆ ಮುಸ್ಲಿಮರಿಗೆ ಮಾಡಿರುವಂತಹ ಘೋರ ಅವಮಾನವಾಗಿದೆ. ಇವರ ಪ್ರಚೋದನಕಾರಿ ಭಾಷಣದ ವಿರುದ್ಧ ಶೀಘ್ರವೇ ದೂರು ನೀಡುವ ಮೂಲಕ ಕಾನೂನು ಸಮರ ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.