ಮಣಿಪಾಲ: ಡಿ.4ರಿಂದ ದಕ್ಷಿಣ ವಲಯ ವಿವಿ ಚೆಸ್ ಟೂರ್ನಿ
ಮಣಿಪಾಲ, ಡಿ.3: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಆಶ್ರಯದಲ್ಲಿ ದಕ್ಷಿಣ ವಲಯ ಅಂತರ ವಿವಿ ಪುರುಷರ ಚೆಸ್ ಟೂರ್ನಿ ಡಿ.4ರಿಂದ ಡಿ.7ರವರೆಗೆ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ. ಮಾಹೆ ಇದೇ ಮೊದಲ ಬಾರಿಗೆ ಈ ಟೂರ್ನಿಯನ್ನು ಮಣಿಪಾಲದಲ್ಲಿ ಆಯೋಜಿ ಸುತ್ತಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಪಾಂಡಿಚೇರಿ ರಾಜ್ಯಗಳಿಂದ 80 ವಿವಿ ತಂಡಗಳು ನಾಲ್ಕು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿವೆ. ಒಟ್ಟಾರೆಯಾಗಿ 480 ಮಂದಿ ಆಟಗಾರರು ಹಾಗೂ 100 ಮಂದಿ ತಂಡದ ಮ್ಯಾನೇಜರ್ ಹಾಗೂಕೋಚ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದವರು ತಿಳಿಸಿದರು.
ಇಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ವಿವಿ ತಂಡಗಳು ಇದೇ ಡಿ.15ರಿಂದ ಮೀರತ್‌ನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿವಿ ಚೆಸ್ ಟೂರ್ನಿಯಲ್ಲಿ ದಕ್ಷಿಣ ವಲಯದಿಂದ ಆಡಲು ತೇರ್ಗಡೆಗೊಳ್ಳಲಿವೆ. ಚೆನ್ನೈನ ಅಣ್ಣಾ ವಿವಿ ದಕ್ಷಿಣ ವಲಯದ ಹಾಲಿ ಚಾಂಪಿಯನ್ ತಂಡವಾದರೆ, ಚೆನ್ನೈನದೇ ಆದ ಎಸ್‌ಆರ್‌ಎಂ ವಿವಿ ರನ್ನರ್ ಅಪ್ ಆಗಿದೆ. ಬೆಂಗಳೂರಿನ ಪಿಇಎಸ್ ವಿವಿ ಹಾಗೂ ಕಲ್ಲಿಕೋಟೆ ವಿವಿಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಹೊಂದಿವೆ ಎಂದು ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ ನಾಯಕ್ ತಿಳಿಸಿದರು.
ಕಳೆದ ಬಾರಿ ಅಖಿಲ ಭಾರತ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿರುವ ಅಣ್ಣಾ ವಿವಿ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ಫೆವರೀಟ್ ತಂಡವಾಗಿದೆ. ಕಳೆದ ವರ್ಷ ಮಾಹೆ ದಕ್ಷಿಣ ವಲಯ ಟೂರ್ನಿಯಲ್ಲಿ 14ನೇ ಸ್ಥಾನ ಸಂಪಾದಿಸಿತ್ತು ಎಂದೂ ಅವರು ವಿವರಿಸಿದರು.
ಈ ಬಾರಿ ಪ್ರತಿ ತಂಡ ತಲಾ ಏಳು ಪಂದ್ಯಗಳನ್ನು ಆಡಲಿವೆ. ಗರಿಷ್ಠ ಅಂಕ ಸಂಗ್ರಹಿಸಿದ ತಂಡ ವಿಜಯಿಯಾಗಲಿದೆ. ಪ್ರತಿ ಪಂದ್ಯದಲ್ಲಿ ನಾಲ್ಕು ಬೋರ್ಡ್ ಗಳಲ್ಲಿ ಆಟ ನಡೆಯಲಿದೆ. ಟೂರ್ನಿಯ ಉದ್ಘಾಟನೆ ನಾಳೆ ಬೆಳಗ್ಗೆ 9:00ಗಂಟೆಗೆ ನಡೆಯಲಿದೆ. ಡಾ.ಎಚ್.ಎಸ್‌ಬಲ್ಲಾಳ್, ಅಂತಾರಾಷ್ಟ್ರೀಯ ಮಾಸ್ಟರ್ ಶಿವಮೊಗ್ಗದ ಸ್ಟಾನಿ ಜೋರ್ಜ್ ಅಂಟೋನಿ ಮುಖ್ಯ ಅತಿಥಿಗಳಾಗಿರುವರು.
ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ರಾಜ ಗೋಪಾಲ್ ಶೆಣೈ, ಪ್ರೊ ವೈಸ್‌ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಎಂಐಟಿಯ ನಿರ್ದೇಶಕ ಡಾ.ಶ್ರೀಕಾಂತ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತ ರಿದ್ದರು.