ವಾಯುಮಾಲಿನ್ಯ: ಎನ್‌ಜಿಟಿಯಿಂದ ದಿಲ್ಲಿ ಸರಕಾರಕ್ಕೆ 25 ಕೋ.ರೂ.ದಂಡ
ಹೊಸದಿಲ್ಲಿ, ಡಿ.3:ನಗರದಲ್ಲಿಯ ವಾಯುಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ವೈಫಲ್ಯಕ್ಕಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ 25 ಕೋ.ರೂ.ಗಳನ್ನು ದಂಡರೂಪದಲ್ಲಿ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಸೋಮವಾರ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡಿದೆ.
ಈ ಸಂಬಂಧ ಇನ್ನಷ್ಟು ಲೋಪಗಳು ಆಗುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ಸಿಪಿಸಿಬಿಗೆ 25 ಕೋ.ರೂ.ಗಳ ನಿರ್ವಹಣೆ ಖಾತರಿಯನ್ನು ಸಲ್ಲಿಸುವಂತೆಯೂ ಎನ್‌ಜಿಟಿ ಅಧ್ಯಕ್ಷ ನ್ಯಾ.ಆದರ್ಶ ಕುಮಾರ ಗೋಯೆಲ್ ನೇತೃತ್ವದ ಪೀಠವು ಆಪ್ ಸರಕಾರಕ್ಕೆ ಸೂಚಿಸಿತು.
ತನ್ನ ಸ್ಪಷ್ಟ ನಿರ್ದೇಶಗಳ ಹೊರತಾಗಿಯೂ ನ್ಯಾಯಾಧಿಕರಣದ ಆದೇಶಗಳನ್ನು ಪಾಲಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಮತ್ತು ಅಧಿಕಾರಿಗಳ ಮೂಗಿನಡಿಯಲ್ಲಿಯೇ ಕಾನೂನನ್ನು ರಾಜಾರೋಷ ಉಲ್ಲಂಘಿಸುವ ಮೂಲಕ ಎಗ್ಗಿಲ್ಲದ ವಾಯುಮಾಲಿನ್ಯ ಮುಂದುವರಿದಿದೆ ಎಂದು ಪೀಠವು ಕಿಡಿಕಾರಿತು.
ವಾಯುಮಾಲಿನ್ಯದ ವಿರುದ್ಧ ಸತೀಶ ಕುಮಾರ ಮತ್ತು ಮಹಾವೀರ ಸಿಂಗ್ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.