ಗೃಹ ಕಾರ್ಯದರ್ಶಿಯ ವಿರುದ್ಧ ದಂಡನಾ ಕ್ರಮ: ಕೇಂದ್ರ ಮಾಹಿತಿ ಆಯೋಗದ ಸಿಐಸಿ ಎಚ್ಚರಿಕೆ
ಅಸ್ಸಾಂ ನಕಲಿ ಎನ್‌ಕೌಂಟರ್ ಪ್ರಕರಣ
ಹೊಸದಿಲ್ಲಿ, ಡಿ.3: ಕಳೆದ ವರ್ಷ ಅಸ್ಸಾಮಿನಲ್ಲಿ ನಡೆದಿತ್ತೆನ್ನಲಾದ,ಆಗಿನ ಸಿಆರ್‌ಪಿಎಫ್ ಡಿಜಿ ರಜನೀಶ ರಾಯ್ ಅವರು ವರದಿ ಮಾಡಿದ್ದ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಗಾಬಾ ಅವರಿಗೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ಅಂತಿಮ ಅವಕಾಶವನ್ನು ನೀಡಿದೆ. ಡಿ.19ರಂದು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ತನಗೆ ಈ ದಾಖಲೆಗಳನ್ನು ಸಲ್ಲಿಸುವಂತೆ ತಾಕೀತು ಮಾಡಿರುವ ಸಿಐಸಿ,ಇದಕ್ಕೆ ತಪ್ಪಿದರೆ ಅವರ ವಿರುದ್ಧ ದಂಡನಾ ಕ್ರಮಗಳನ್ನು ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಸಿಐಸಿಯ ಅವಗಾಹನೆಗೆ ದಾಖಲೆಗಳನ್ನು ಒಪ್ಪಿಸದಿರುವ ಗೃಹ ಸಚಿವಾಲಯದ ನಿಲುವಿನಿಂದ ಕೆರಳಿರುವ ಆಯೋಗವು,ಈ ವಿಷಯದಲ್ಲಿ ನಿರ್ಧಾರವನ್ನು ಉನ್ನತ ಮಟ್ಟದಲ್ಲಿ ಕೈಗೊಳ್ಳಲಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ,ಹೀಗಾಗಿ ಗೃಹ ಕಾರ್ಯದರ್ಶಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯೆಂದು ಪರಿಗಣಿಸಲಾಗಿದೆ ಎಂದು ಹೇಳಿದೆ.
ಆರ್‌ಟಿಐ ಕಾಯ್ದೆಯಡಿ ಯಾವುದೇ ನೆಪವೊಡ್ಡಿ ಈ ಆಯೋಗಕ್ಕೆ ದಾಖಲೆಗಳ ಸಲ್ಲಿಕೆಯನ್ನು ತಡೆ ಹಿಡಿಯುವಂತಿಲ್ಲ. ಆಯೋಗವು ಶಾಸನಬದ್ಧ ಅಧಿಕಾರವನ್ನು ಹೊಂದಿದೆ ಮತ್ತು ಇದನ್ನು ಸರ್ವೋಚ್ಚ ನ್ಯಾಯಾಲಯವೂ ಅನುಮೋದಿಸಿದೆ ಎಂದು ಸಿಐಸಿ ಹೇಳಿದೆ.
ರಜನೀಶ ರಾಯ್ ಅವರ ವರದಿಯ ಪ್ರತಿಯನ್ನು ಕೋರಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಗೆ ಸಂಬಂಧಿಸಿದಂತೆ ಸಿಐಸಿಯ ಈ ಎಚ್ಚರಿಕೆ ಹೊರಬಿದ್ದಿದೆ.
ಸೇನೆ,ಅಸ್ಸ್ಸಾಂ ಪೊಲೀಸ್,ಸಿಆರ್‌ಪಿಎಫ್,ಕೋಬ್ರಾ ಮತ್ತು ಎಸ್‌ಎಸ್‌ಬಿ ಜಂಟಿಪಡೆಗಳು 2017,ಮಾ.29-30ರಂದು ಚಿರಾಂಗ್ ಜಿಲ್ಲೆಯ ಸಿಮ್ಲಾಗುರಿ ಪ್ರದೇಶದಲ್ಲಿ ನಕಲಿ ಎನ್‌ಕೌಂಟರ್ ನಡೆಸಿ ಇಬ್ಬರನ್ನು ಕೊಂದಿದ್ದವು ಮತ್ತು ಅವರು ನಿಷೇಧಿತ ಗುಂಪು ಎನ್‌ಡಿಎಫ್‌ಬಿ(ಎಸ್)ಯ ಬಂಡುಕೋರರಾಗಿದ್ದರು ಎಂದು ಅವು ಹೇಳಿಕೊಂಡಿದ್ದವು ಎಂದು ರಾಯ್ ತನ್ನ ವರದಿಯಲ್ಲಿ ಆರೋಪಿಸಿದ್ದರು.







