ಶಬರಿಮಲೆಯಲ್ಲಿ ಪತ್ರಕರ್ತರನ್ನು ತಡೆದ ವ್ಯಕ್ತಿ ‘ಮಹಿಳೆಯರ ಮಹಾಗೋಡೆ’ ಜಾಥಾದ ಸಂಚಾಲಕ!

ತಿರುವನಂತಪುರಂ, ಡಿ.3: ಶಬರಿಮಲೆಯಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆ ಸಂದರ್ಭ ಎನ್‌ಡಿಟಿವಿ ತಂಡದ ಪತ್ರಕರ್ತರನ್ನು ತಡೆದು , ಗೇಲಿ ಮಾಡಿದ ಗುಂಪಿನಲ್ಲಿದ್ದ ವ್ಯಕ್ತಿಯನ್ನು ಜನವರಿ 1ರಂದು ಕೇರಳದಲ್ಲಿ ಹಮ್ಮಿಕೊಂಡಿರುವ ‘1 ಮಿಲಿಯನ್ ಮಹಿಳೆಯರ ಮಾನವ ಸರಪಳಿ’ ಕಾರ್ಯಕ್ರಮದ ಮೇಲುಸ್ತುವಾರಿ ಸಮಿತಿಯ ಜಂಟಿ ಸಂಚಾಲಕರಾಗಿ ನೇಮಿಸಲಾಗಿದೆ.
ಕೇರಳವನ್ನು ಮಧ್ಯಯುಗದ ಕಾಲಕ್ಕೆ ಮರಳುವುದನ್ನು ತಡೆಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದರು. ಇದೀಗ ಈ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವ ಸಮಿತಿಯ ಜಂಟಿ ಸಂಚಾಲಕರಾಗಿ ಸಿ.ಪಿ. ಸುಗಥನ್ ಎಂಬ ವ್ಯಕ್ತಿಯನ್ನು ಮುಖ್ಯಮಂತ್ರಿ ನೇಮಿಸಿದ್ದಾರೆ. ಸುಗಥನ್ ‘ಹಿಂದು ಸಂಸತ್ತು’ ಎಂಬ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾನೆ. ಎನ್‌ಡಿಟಿವಿ ಪತ್ರಕರ್ತರನ್ನು ಗೇಲಿ ಮಾಡಿದ್ದ ತಂಡದಲ್ಲಿ ತಾನಿದ್ದೆ ಎಂಬ ವರದಿಯನ್ನು ಸುಗಥನ್ ನಿರಾಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಹಾಗಿದ್ದರೆ, ಇದೀಗ ಮಹಿಳಾ ಗೋಡೆ ಕಾರ್ಯಕ್ರಮದ ಸಂಚಾಲಕ ಹುದ್ದೆಯನ್ನು ವಹಿಸುವ ಮೂಲಕ ಸುಪ್ರೀಂಕೋರ್ಟ್‌ನ ತೀರ್ಪನ್ನು(ಎಲ್ಲಾ ವಯೋಮಾನದ ಮಹಿಳೆಯರೂ ಶಬರಿಮಲೆ ದೇವಸ್ಥಾನ ಪ್ರವೇಶಿಸಬಹುದು ಎಂಬ ತೀರ್ಪು) ನೀವು ಒಪ್ಪಿಕೊಂಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುಗಥಂ, ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಸುಪ್ರೀಂಕೋರ್ಟ್ ತನ್ನ ತೀರ್ಪು ಮರುಪರಿಶೀಲನೆಗೆ ಒಪ್ಪಿದೆ ಎಂದು ತಿಳಿಸಿದ್ದಾರೆ.
ತಮ್ಮ ಸಂಘಟನೆಯೂ ಪ್ರಗತಿಪರ ಚಿಂತನೆಯನ್ನು ಹೊಂದಿದೆ. ಮಹಿಳಾ ಗೋಡೆ ಜಾಥಾ ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ್ದಲ್ಲ. ಸುಪ್ರೀಂಕೋರ್ಟ್‌ನ ಆದೇಶವನ್ನು ಜಾರಿಗೊಳಿಸುವುದು ಸರಕಾರದ ಕೆಲಸವಾಗಿದೆ. ಸರಕಾರದ ಕಾರ್ಯನೀತಿ ಹಾಗೂ ತಮ್ಮ ನೀತಿ ಪ್ರತ್ಯೇಕವಾಗಿದೆ ಎಂದಿದ್ದಾರೆ. ಈ ಮಧ್ಯೆ, ಸುಗಥಂ ನೇಮಕವನ್ನು ಮುಖ್ಯಮಂತ್ರಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ಸಂಘಟನೆಗಳನ್ನೂ ಒಗ್ಗೂಡಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಿತಿಯಲ್ಲಿ ಹಲವರಿದ್ದಾರೆ. ಈ ಹಿಂದೆ ಕೆಲವರನ್ನು ತಡೆದು ನಿಲ್ಲಿಸಿದ್ದರು ಎಂಬ ಕಾರಣಕ್ಕೆ ಯಾರನ್ನೂ ದೂರ ಇಡಲು ನಾವು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಸುಗಥಂ ನೇಮಕಕ್ಕೆ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಆಕ್ಷೇಪ ಸೂಚಿಸಿದ್ದಾರೆ. ಪತ್ರಕರ್ತರನ್ನು ತಡೆದು ನಿಲ್ಲಿಸಿ ಅವರ ವಿರುದ್ಧ ಘೋಷಣೆ ಕೂಗಿ ಗೇಲಿ ಮಾಡಿದ ವ್ಯಕ್ತಿಯನ್ನು ಮಹಿಳೆಯರ ಕಾರ್ಯಕ್ರಮದ ಸಂಚಾಲಕರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.







