ಬಿಬಿಎಂಪಿ ಸ್ಥಾಯಿ ಸಮಿತಿಗಳ ಹಂಚಿಕೆಯಲ್ಲಿ ಗೊಂದಲ: ಜೆಡಿಎಸ್‌ಗೆ ಉಪಮೇಯರ್ ಸ್ಥಾನ

ಬೆಂಗಳೂರು, ಡಿ.3: ಉಪಮೇಯರ್ ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿದ್ದ ಉಪಮೇಯರ್ ಸ್ಥಾನ ಜೆಡಿಎಸ್ ಪಾಲಾಗಿದ್ದು, ಸ್ಥಾಯಿ ಸಮಿತಿಗಳ ಹಂಚಿಕೆಯಲ್ಲಿ ಮೈತ್ರಿಕೂಟ ಮತ್ತು ಪಕ್ಷೇತರರ ನಡುವೆ ಒಮ್ಮತ ಮೂಡಿಬಂದಿಲ್ಲ. ಉಪಮೇಯರ್ ಸ್ಥಾನಕ್ಕಾಗಿ ಪಕ್ಷೇತರರು ತಿಂಗಳ ಮೊದಲಿನಿಂದ ಸಭೆ ಮಾಡಿದರೂ ಅಂತಿಮವಾಗಿ ಜೆಡಿಎಸ್ ಪಾಲಾಗಿದೆ.
ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷಗಿರಿ ಚುನಾವಣೆಗೆ ಒಂದೇ ದಿನ ಬಾಕಿ ಇದ್ದು, ಆಯ್ಕೆ ಪ್ರಕ್ರಿಯೆಗೆ ರಾಜ್ಯ ನಾಯಕರು ಲಗ್ಗೆ ಇಟ್ಟಿದ್ದಾರೆ. ಆಕ್ಷಾಂಕಿಗಳ ಪಟ್ಟಿ ಬೆಳೆಯುತ್ತಿದ್ದು, ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಯಾವ ಸಮಿತಿಗೆ ಯಾರು ಅಧ್ಯಕ್ಷರಾಗಬೇಕು ಎಂಬುದು ಪ್ರಶ್ನೆಯಾಗಿದೆ.
ಕಳೆದ ವರ್ಷ 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ತಲಾ 4 ಸ್ಥಾಯಿ ಸಮಿತಿ ಹಂಚಿಕೆ ಮಾಡಿಕೊಂಡಿದ್ದರು. ಆದರೆ ಕಾಂಗ್ರೆಸ್ ಸಂಖ್ಯಾಬಲ 75 ಇದ್ದು, ಜೆಡಿಎಸ್ 14, ಮೈತ್ರಿಕೂಟಕ್ಕೆ ಬೆಂಬಲ ನೀಡಿದ ಪಕ್ಷೇತರರು 6 ಸದಸ್ಯರಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಸ್ಥಾಯಿ ಸಮಿತಿಗಳ ಅಧಿಕಾರ ಅನುಭವಿಸಿದ್ದು, ಕಾಂಗ್ರೆಸ್‌ನ ಕೆಲ ಸದಸ್ಯರು ಇನ್ನೂ ಅಧಿಕಾರ ಅನುಭವಿಸಿಲ್ಲ. ಆದ್ದರಿಂದ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಸ್ಥಾಯಿ ಸಮಿತಿಗಳನ್ನು ನೀಡಬೇಕು ಎಂದು ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸಿದೆ.
ಉಪಮೇಯರ್ ಸ್ಥಾನಕ್ಕೆ ಭದ್ರೇಗೌಡ ಅವರು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಅವರ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. ಅಕ್ಟೋಬರ್‌ನಲ್ಲಿ ನಡೆದ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭದ್ರೇಗೌಡ ಆಕಾಂಕ್ಷಿಯಾಗಿದ್ದರು. ಆದರೆ, ಅಂತಿಮವಾಗಿ ರಮೀಳಾ ಉಮಾಶಂಕರ್ ಅವರಿಗೆ ಉಪಮೇಯರ್ ಸ್ಥಾನ ನೀಡಲಾಗಿತ್ತು. ಪ್ರಸ್ತುತ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ ಸೇರಿ 3 ಸದಸ್ಯರು ರೇಸ್‌ನಲ್ಲಿದ್ದಾರೆ.
ಪ್ರಮುಖ ಸ್ಥಾಯಿ ಸಮಿತಿ ಮೇಲೆ ಕಣ್ಣು: ತೆರಿಗೆ ಮತ್ತು ಆರ್ಥಿ ಸ್ಥಾಯಿ ಸಮಿತಿ, ಶಿಕ್ಷಣ, ಬೃಹತ್ ಸಾರ್ವಜನಿಕ ಕಾಮಗಾರಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ಆರೋಗ್ಯ ಸೇರಿ ಹಲವು ಪ್ರಮುಖ ಸ್ಥಾಯಿ ಸಮಿತಿ ಮೇಲೆ ಮೈತ್ರಿಕೂಟ ಕಣ್ಣಿಟ್ಟಿದ್ದು, ಪಕ್ಷೇತರ ಸದಸ್ಯರೂ ಕೂಡ ಪ್ರಮುಖ ಸ್ಥಾಯಿ ಸಮಿತಿಗಳನ್ನು ನೀಡಬೇಕು ಎಂದು ಆಗ್ರಹಿಸಿದೆ.







