ಫಿರ್ಹಾದ್ ಹಕೀಮ್ ಕೋಲ್ಕತಾದ ಮೊದಲ ಮುಸ್ಲಿಂ ಮೇಯರ್
![ಫಿರ್ಹಾದ್ ಹಕೀಮ್ ಕೋಲ್ಕತಾದ ಮೊದಲ ಮುಸ್ಲಿಂ ಮೇಯರ್ ಫಿರ್ಹಾದ್ ಹಕೀಮ್ ಕೋಲ್ಕತಾದ ಮೊದಲ ಮುಸ್ಲಿಂ ಮೇಯರ್](https://www.varthabharati.in/sites/default/files/images/articles/2018/12/3/166325.jpeg)
ಕೋಲ್ಕತಾ, ಡಿ.3: ಪಶ್ಚಿಮ ಬಂಗಾಳದ ಮುನ್ಸಿಪಲ್ ವ್ಯವಹಾರಗಳ ಸಚಿವ ಫಿರ್ಹಾದ್ ಹಕೀಮ್ ಅವರು ಕೋಲ್ಕತಾ ಮಹಾನಗರ ಪಾಲಿಕೆ (ಕೆಎಂಸಿ)ಯ ಮೊದಲ ಮುಸ್ಲಿಂ ಮೇಯರ್ ಆಗಿ ಸೋಮವಾರ ಆಯ್ಕೆಯಾಗಿದ್ದಾರೆ.
ಕೆಎಂಸಿ 144 ಸದಸ್ಯ ಬಲವನ್ನು ಹೊಂದಿದ್ದು, ಹಕೀಮ್ ಅವರು 122 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ಮೀನಾದೇವಿ ಪುರೋಹಿತ ಅವರು ಕೇವಲ ಐದು ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಎಡರಂಗದ 12 ಮತ್ತು ಕಾಂಗ್ರೆಸ್ನ ಇಬ್ಬರು ಸದಸ್ಯರು ಚುನಾವಣೆಯನ್ನು ಬಹಿಷ್ಕರಿಸಿದ್ದರು.
ಕೆಎಂಸಿಯಲ್ಲಿ ಟಿಎಂಸಿ 122, ಎಡರಂಗ 14, ಬಿಜೆಪಿ 5 ಮತ್ತು ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಹೊಂದಿವೆ. ಒಂದು ಸ್ಥಾನವು ತೆರವಾಗಿದೆ. ಟಿಎಂಸಿಯ ಓರ್ವ ಸದಸ್ಯ ಅನಾರೋಗ್ಯದಿಂದಾಗಿ ಮತದಾನಕ್ಕೆ ಗೈರುಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸ್ವಾತಂತ್ರ ನಂತರ ಕೋಲ್ಕತಾದ 29ನೇ ಮೇಯರ್ ಆಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಕೀಮ್, ತನ್ನ ವಿಜಯವು ಬಿಜೆಪಿಯ ನೈತಿಕ ಸೋಲಾಗಿದೆ. ತನ್ನನ್ನು ತನ್ನ ಕೆಲಸಗಳಿಂದ ಗುರುತಿಸಬೇಕೇ ಹೊರತು ಧರ್ಮದಿಂದಲ್ಲ ಎಂದು ಹೇಳಿದರು.
ಹಕೀಮ್ ಸದನದ ಸದಸ್ಯರಲ್ಲವೆಂಬ ನೆಲೆಯಲ್ಲಿ ಅವರ ಉಮೇದುವಾರಿಕೆಯನ್ನು ಸಿಪಿಎಂ ಪ್ರಶ್ನಿಸಿತ್ತಾದರೂ ಚುನಾವಣೆಗೆ ತಡೆಯಾಜ್ಞೆ ನೀಡಲು ಕೋಲ್ಕತಾ ಉಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿತ್ತು.