ಫ್ರಾನ್ಸ್ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್
ಹಾಕಿ ವಿಶ್ವಕಪ್

ಭುವನೇಶ್ವರ, ಡಿ.3: ನಾಯಕ ಹಾಗೂ ಗೋಲ್‌ಕೀಪರ್ ಕ್ವಿಕೊ ಕಾರ್ಟೆಸ್ ಎದುರಾಳಿ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್‌ನಲ್ಲಿನ ಗೋಲು ನಿರಾಕರಿಸುವ ಮೂಲಕ ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡ ಹಾಕಿ ವಿಶ್ವಕಪ್‌ನ ‘ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಲು ನೆರವಾಗಿದ್ದಾರೆ.
ಸೋಮವಾರ ನಡೆದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಉಭಯ ತಂಡಗಳು 2 ಪಂದ್ಯಗಳಲ್ಲಿ ತಲಾ ಒಂದು ಅಂಕ ಗಳಿಸಿವೆ. ಕ್ರಾಸ್ ಓವರ್ ಮೂಲಕ ಮುಂದಿನ ಸುತ್ತಿಗೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿವೆ. ‘ಎ’ ಗುಂಪಿನಲ್ಲಿ ಅರ್ಜೆಂಟೀನ ಮೊದಲ ಸ್ಥಾನದಲ್ಲಿದೆ. ವಿಶ್ವದ ನಂ.8ನೇ ತಂಡ ಸ್ಪೇನ್ ಹಾಗೂ 20ನೇ ರ್ಯಾಂಕಿನ ಫ್ರಾನ್ಸ್ ನಡುವಿನ ಮುಖಾಮುಖಿ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಫ್ರಾನ್ಸ್ 60 ನಿಮಿಷಗಳ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದಿತ್ತು. ಹಲವು ಅವಕಾಶವನ್ನು ಪಡೆದಿದ್ದ ಫ್ರಾನ್ಸ್‌ಗೆ ಸ್ಪೇನ್ ತಡೆಗೋಡೆಯಾಗಿ ನಿಂತಿತು.
ಫ್ರಾನ್ಸ್ ಆರನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಆಘಾತ ನೀಡಿತು. ಟಿಮೊಥಿ ಕ್ಲೆಮೆಂಟ್ ಫೀಲ್ಡ್ ಗೋಲು ಮೂಲಕ ಫ್ರಾನ್ಸ್‌ನ ಗೋಲು ಖಾತೆ ತೆರೆದರು.
48ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಲ್ವಾರೊ ಇಗ್ಲೆಸಿಯಾಸ್ ಸ್ಪೇನ್ ತಿರುಗೇಟು ನೀಡಲು ನೆರವಾದರು. ಫ್ರಾನ್ಸ್‌ಗೆ ಪ್ರಮುಖ ಟೂರ್ನಿಯಲ್ಲಿ ಸ್ಪೇನ್‌ಗೆ ಮೊದಲ ಬಾರಿ ಸೋಲುಣಿಸುವ ಉತ್ತಮ ಅವಕಾಶ ಲಭಿಸಿತ್ತು. ಆದರೆ, ಸ್ಪೇನ್ ನಾಯಕ ಕಾರ್ಟೆಸ್ ತಂಡದ ನೆರವಿಗೆ ಧಾವಿಸಿ ಫ್ರಾನ್ಸ್‌ಗೆ ಗೆಲುವನ್ನು ನಿರಾಕರಿಸಿದರು.
ಸ್ಪೇನ್‌ಗೆ ಕೂಡ ಗೋಲು ಗಳಿಸುವ ಉತ್ತಮ ಅವಕಾಶಗಳಿದ್ದವು. ಆದರೆ, ಗೋಲ್‌ಕೀಪರ್ ಅರ್ಥರ್ ಥಿಫ್ರೆ ನೇತೃತ್ವದ ಫ್ರಾನ್ಸ್‌ನ ಡಿಫೆನ್ಸ್ ವಿಭಾಗ ಸ್ಪೇನ್‌ಗೆ ಗೋಲು ನಿರಾಕರಿಸಿತು.
ಸ್ಪೇನ್ ಪಂದ್ಯದಲ್ಲಿ ಒಟ್ಟು ಏಳು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ,ಒಂದೂ ಬಾರಿಯೂ ಫ್ರಾನ್ಸ್‌ನ ರಕ್ಷಣಾಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. ಸ್ಪೇನ್ ತಂಡ ಟೂರ್ನಮೆಂಟ್‌ನ ತನ್ನ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ವಿರುದ್ಧ ಸೋತಿತ್ತು. ಫ್ರಾನ್ಸ್ ತಂಡ ನ್ಯೂಝಿಲೆಂಡ್ ವಿರುದ್ಧ 1-2 ಅಂತರದಿಂದ ಸೋಲುಂಡಿದೆ.
ಡಿ.6 ರಂದು ನಡೆಯಲಿರುವ ಅಂತಿಮ ಗ್ರೂಪ್ ಪಂದ್ಯದಲ್ಲಿ ಸ್ಪೇನ್ ತಂಡ ನ್ಯೂಝಿಲೆಂಡ್ ತಂಡವನ್ನೂ ಹಾಗೂ ಫ್ರಾನ್ಸ್ ತಂಡ ಅರ್ಜೆಂಟೀನ ತಂಡವನ್ನು ಎದುರಿಸಲಿದೆ.







