ಕಿವೀಸ್ ಕಿವಿ ಹಿಂಡಿದ ಅರ್ಜೆಂಟೀನ

ಭುವನೇಶ್ವರ, ಡಿ.3: ವಿಶ್ವದ ನಂ.2ನೇ ತಂಡ ಅರ್ಜೆಂಟೀನ ಹಾಕಿ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ 23ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು. ತಂಡದ ಸ್ಟಾರ್ ಆಟಗಾರ ಅಗಸ್ಟಿನ್ ಮಝಿಲ್ಲಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಅರ್ಜೆಂಟೀನ ತಂಡ 2 ಗೋಲುಗಳನ್ನು ಬಾರಿಸಿತು. ಲುಕಾಸ್ ವಿಲಾ 41ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಲುಕಾಸ್ ಮಾರ್ಟಿನೆಝ್ 55ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ತಂಡದ ಪರ 3ನೇ ಗೋಲು ಬಾರಿಸಿ ಭರ್ಜರಿ ಗೆಲುವು ತಂದರು.
ಅರ್ಜೆಂಟೀನ ಪೂರ್ಣ ಮೂರಂಕ ಗಳಿಸಿ 2 ಪಂದ್ಯಗಳಲ್ಲಿ ಒಟ್ಟು ಆರು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ನ್ಯೂಝಿಲೆಂಡ್ 2 ಪಂದ್ಯಗಳಲ್ಲಿ ಮೂರಂಕ ಗಳಿಸಿ 2ನೇ ಸ್ಥಾನದಲ್ಲಿದೆ.





