ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಆಸೀಸ್ ದಾಂಡಿಗ ಡೇವಿಸ್
ಅಂಡರ್-19 ಟೂರ್ನಿಯಲ್ಲಿ ಪ್ರಪ್ರಥಮ ದ್ವಿಶತಕ

ಅಡಿಲೇಡ್, ಡಿ.3: ಏಕದಿನ ಪಂದ್ಯವೊಂದರಲ್ಲಿ ದಾಖಲೆಯ ದ್ವಿಶತಕದೊಂದಿಗೆ ಓವರ್‌ವೊಂದರಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದವರ ಸಾಲಿಗೆ ಆಸ್ಟ್ರೇಲಿಯದ ಯುವ ಕ್ರಿಕೆಟಿಗ ಒಲಿವರ್ ಡೇವಿಸ್ ಹೊಸ ಸೇರ್ಪಡೆಯಾಗಿದ್ದಾರೆ. ಸೋಮವಾರ ಗ್ಲಾಂಡರ್ ಓವಲ್ ಕ್ರೀಡಾಂಗಣದಲ್ಲಿ ಆರಂಭಗೊಂಡ ರಾಷ್ಟ್ರೀಯ ಅಂಡರ್-19 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂ ಸೌತ್‌ವೇಲ್ಸ್ ಮೆಟ್ರೊ ತಂಡದ ನಾಯಕ ಡೇವಿಸ್, ನಾರ್ಥರ್ನ್ ಟೆರಿಟರಿ ತಂಡದ ಆಫ್‌ಸ್ಪಿನ್ನರ್ ಜಾಕ್ ಜೇಮ್ಸ್ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ಮೆಟ್ರೊ ತಂಡ 4 ವಿಕೆಟ್ ನಷ್ಟಕ್ಕೆ ಒಟ್ಟು 406 ರನ್ ಗಳಿಸಿತು. ಅದರಲ್ಲಿ ಡೇವಿಸ್‌ರ ಪಾಲು 207 ರನ್. ಒಟ್ಟು 115 ಎಸೆತಗಳನ್ನು ಎದುರಿಸಿದ ಡೇವಿಸ್, 14 ಬೌಂಡರಿ ಮತ್ತು 17 ಅಮೋಘ ಸಿಕ್ಸರ್‌ಗಳ ಮಳೆ ಸುರಿಸಿದರು. ಶತಕ ಗಳಿಸಲು 74 ಎಸೆತಗಳನ್ನು ಎದುರಿಸಿದ ಅವರು, ಆನಂತರ 39 ಎಸೆತಗಳಲ್ಲಿ ದ್ವಿಶತಕ ತಲುಪಿದರು.
ಈ ಅದ್ಭುತ ಸಾಹಸದೊಂದಿಗೆ ಡೇವಿಸ್ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ ಗ್ಯಾರಿಫೀಲ್ಡ್ ಸೋಬರ್ಸ್, ರವಿ ಶಾಸ್ತ್ರಿ, ಹರ್ಷಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್‌ರ ಸಾಲಿಗೆ ಸೇರ್ಪಡೆಯಾದರು. ಅಂಡರ್-19 ಟೂರ್ನಿಯ ಇತಿಹಾಸದಲ್ಲಿ ಇದು ಪ್ರಪ್ರಥಮ ದ್ವಿಶತಕವಾಗಿದೆ. ಅಂತಿಮವಾಗಿ ನಾರ್ಥರ್ನ್ ಟೆರಿಟರಿ ತಂಡವನ್ನು 238 ರನ್‌ಗಳಿಗೆ ನಿಯಂತ್ರಿಸಿದ ನ್ಯೂ ಸೌತ್ ವೇಲ್ಸ್ ಮೆಟ್ರೊ ತಂಡ ಪಂದ್ಯವನ್ನು 168 ರನ್ ಅಂತರದಿಂದ ಜಯಿಸಿತು.





