ನ್ಯೂಝಿಲೆಂಡ್ 7ಕ್ಕೆ 229
3ನೇ ಟೆಸ್ಟ್: ಯಾಸಿರ್ ಶಾಗೆ ಮೂರು ವಿಕೆಟ್

ಅಬುಧಾಬಿ, ಡಿ.3: ನಾಯಕ ಕೇನ್ ವಿಲಿಯಮ್ಸನ್ ಹೋರಾಟಕಾರಿ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಸೋಮವಾರ ಇಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ನಷ್ಟಕ್ಕೆ 229 ರನ್ ಕಲೆ ಹಾಕಿದೆ.
ಲೆಗ್ ಸ್ಪಿನ್ನರ್ ಯಾಸಿರ್ ಶಾ(3-62) ಮೋಡಿಗೆ ಸಿಲುಕಿದ ಕಿವೀಸ್ ಒಂದು ಹಂತದಲ್ಲಿ 72 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ176 ಎಸೆತಗಳಲ್ಲಿ 89 ರನ್ ಗಳಿಸಿದ ವಿಲಿಯಮ್ಸನ್ 5ನೇ ವಿಕೆಟ್‌ಗೆ ವಾಟ್ಲಿಂಗ್‌ರೊಂದಿಗೆ 104 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. 4 ಗಂಟೆಗಳ ಕಾಲ ಪಾಕ್ ದಾಳಿಯನ್ನು ಎದುರಿಸಿದ ವಾಟ್ಲಿಂಗ್ 180 ಎಸೆತಗಳಲ್ಲಿ ಔಟಾಗದೆ 42 ರನ್ ಗಳಿಸಿದ್ದಾರೆ. ತನ್ನ ತಾಳ್ಮೆಯ ಇನಿಂಗ್ಸ್‌ನಲ್ಲಿ ಕೇವಲ 1 ಬೌಂಡರಿ ಬಾರಿಸಿದ್ದಾರೆ. ವೇಗದ ಬೌಲರ್ ಹಸನ್ ಅಲಿ(1-46)ಶತಕದ ಜೊತೆಯಾಟವನ್ನು ಬೇರ್ಪಡಿಸಿದರು. ಬಿಲಾಲ್ ಆಸಿಫ್(2-57) ಆಫ್ ಸ್ಪಿನ್ ಬೌಲಿಂಗ್ ಮೂಲಕ 2 ವಿಕೆಟ್ ಪಡೆದರು.
ಇಂದು ಜೀತ್ ರಾವಲ್(45), ರಾಸ್ ಟೇಲರ್(0) ಹಾಗೂ ಹೆನ್ರಿ ನಿಕೊಲ್ಸ್(1) ವಿಕೆಟನ್ನು ಕಬಳಿಸಿದ 33ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಯಾಸಿರ್‌ಗೆ ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ 200 ವಿಕೆಟ್ ಪೂರೈಸಿದ ಸಾಧನೆ ಮಾಡಲು ಇನ್ನೆರಡು ವಿಕೆಟ್‌ಗಳ ಅಗತ್ಯವಿದೆ. ಆಸೀಸ್‌ನ ಲೆಗ್ ಸ್ಪಿನ್ನರ್ ಕ್ಲಾರಿ ಗ್ರಿಮ್ಮೆಟ್ 1925ರಲ್ಲಿ ತನ್ನ 36ನೇ ಟೆಸ್ಟ್‌ನಲ್ಲಿ 200 ವಿಕೆಟ್ ಪೂರೈಸಿದ್ದ ಸಾಧನೆ ಮಾಡಿದ್ದರು.





