ಬಂಟ್ವಾಳ: ಖಾಸಗಿ ಬಸ್ ಢಿಕ್ಕಿ; ಮಹಿಳೆ ಮೃತ್ಯು

ಬಂಟ್ವಾಳ, ಡಿ. 3: ರಸ್ತೆ ದಾಟಲು ನಿಂತಿದ್ದ ವೇಳೆ ಖಾಸಗಿ ಬಸ್ ವೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಪಾಣೆಮಂಗಳೂರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಮೆಲ್ಕಾರ್ ಸಮೀಪದ ಬೋಗೋಡಿ ನಿವಾಸಿ ಅತಾವುಲ್ಲಾ ಎಂಬವರ ಪತ್ನಿ ರುಕ್ಸಾನಾ (26) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಪತಿ, ಪತ್ನಿ ಇಬ್ಬರು ಮಕ್ಕಳೊಂದಿಗೆ ಇಲ್ಲಿನ ಅಂಗಡಿಯಿಂದ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಬಂದಿದ್ದರು ಎನ್ನಲಾಗಿದೆ. ಇಲ್ಲಿನ ಮನೆ ಸಮೀಪ ರಸ್ತೆ
ದಾಟಲು ನಿಂತಿದ್ದಾಗ ಮುಡಿಪು ಕಡೆಯಿಂದ ಬಿ.ಸಿ.ರೋಡಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಕೊಂಡು ಬಂದು ಮಹಿಳೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರುಕ್ಸನಾ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ, ಇಬ್ಬರು ಮಕ್ಕಳು ಹಾಗೂ ಪತಿ ರಸ್ತೆ ದಾಟಿ ಇನ್ನೊಂದು ಬದಿಗೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್ಸೈ ಮಂಜುಳಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.