ಪುಲ್ಲೇಲ ಗೋಪಿಚಂದ್ ಪುತ್ರನ ಅಮೋಘ ಸಾಧನೆ
ವಿಷ್ಣು ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್

ಹೈದರಾಬಾದ್, ಡಿ.3: ತನ್ನ ತಂದೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಹಾಗೂ ಸಹೋದರಿ ಗಾಯತ್ರಿ ಅವರ ಹಾದಿ ತುಳಿದಿರುವ ಸಾಯಿ ವಿಷ್ಣು ರಾಷ್ಟ್ರೀಯ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯ ಅಂಡರ್-15 ವಿಭಾಗದಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ರವಿವಾರ ಬೆಂಗಳೂರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಸಾಯಿ ಸತ್ಯ ಸರ್ವೇಶ್ ಅವರನ್ನು 21-14, 21-19 ನೇರ ಗೇಮ್‌ಗಳಿಂದ ಮಣಿಸಿದ ಅವರು, ಹೊಸ ತಾರೆಯಾಗಿ ಉದಯಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಶಂಕರ್ ಮುತ್ತುಸ್ವಾಮಿ ಅವರನ್ನು 21-13, 21-17ರ ಅಂತರದಲ್ಲಿ ಮಣಿಸಿದ್ದ ವಿಷ್ಣು, 16ರ ಘಟ್ಟದಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಣವ್ ಶಾರ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಅಂಡರ್-15 ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ತಸ್ನಿಮ್ ಮಿರ್ ಟ್ರೋಫಿಗೆ ಮುತ್ತಿಕ್ಕಿದರು. ಅಂತಿಮ ಪಂದ್ಯದಲ್ಲಿ ಅವರು, ಸಾಕ್ಷಿ ಪೋಗಟ್ ಅವರನ್ನು 21-14, 21-12 ಅಂತರದಿಂದ ಮಣಿಸಿದರು.
ಅಂಡರ್-17 ಬಾಲಕರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ರೋಹನ್ ಗುರ್ಬಾನಿ, 5ನೇ ಶ್ರೇಯಾಂಕದ ಶುಭಂ ಪಟೇಲ್ ಅವರನ್ನು 21-12, 27-25 ಗೇಮ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಬಾಚಿಕೊಂಡರು.





