ಕಾಂಗರೂ ನಾಡಿನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಅಗ್ರ-4 ದಾಂಡಿಗರು
ಬಾರ್ಡರ್ ಗವಾಸ್ಕರ್ ಟ್ರೋಫಿ

ಮೆಲ್ಬೋರ್ನ್, ಡಿ.3: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ನಡೆಯುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಆಸ್ಟ್ರೇಲಿಯದ ನೆಲದಲ್ಲಿ ನಡೆದಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಅಗ್ರ ನಾಲ್ವರು ಆಟಗಾರರ ಸಾಧನೆ ಇಂತಿದೆ...
ಮೆಕಲ್ ಕ್ಲಾರ್ಕ್ 329 ರನ್, ಸಿಡ್ನಿ(2012)
ಮೈಕಲ್ ಕ್ಲಾರ್ಕ್ 2004ರಲ್ಲಿ ಬೆಂಗಳೂರಿನಲ್ಲಿ ಭಾರತ ವಿರುದ್ಧ ಆಡಿರುವ ತನ್ನ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಆದರೆ, ಬಲಗೈ ದಾಂಡಿಗ ಕ್ಲಾರ್ಕ್ 2012ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಔಟಾಗದೆ ಗಳಿಸಿದ 329 ರನ್ ಸ್ಮರಣೀಯವಾಗಿದೆ. ನಾಯಕ ಕ್ಲಾರ್ಕ್ ಮಾಜಿ ನಾಯಕ ರಿಕಿ ಪಾಂಟಿಂಗ್(134)ಅವರೊಂದಿಗೆ 288 ರನ್ ಜೊತೆಯಾಟ ಹಾಗೂ ಮೈಕಲ್ ಹಸ್ಸಿ(ಔಟಾಗದೆ 150)ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 334 ರನ್ ಗಳಿಸಿದ್ದರು. ಕ್ಲಾರ್ಕ್ ತ್ರಿಶತಕದ ನೆರವಿನಿಂದ ಆಸೀಸ್ 4 ವಿಕೆಟ್‌ಗೆ 659 ರನ್ ಗಳಿಸಿತ್ತು.
ರಿಕಿ ಪಾಂಟಿಂಗ್ ಅಡಿಲೇಡ್‌ನಲ್ಲಿ 242, ಮೆಲ್ಬೋರ್ನ್‌ನಲ್ಲಿ 257 (2003).
ಭಾರತ ವಿರುದ್ಧ 2003ರಲ್ಲಿ ಸತತ ಎರಡು ಬಾರಿ ದ್ವಿಶತಕ ಸಿಡಿಸಿದ ರಿಕಿ ಪಾಂಟಿಂಗ್ ಸಾರ್ವಕಾಲಿಕ ಶ್ರೇಷ್ಠ ದಾಂಡಿಗರ ಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದರು. ಸ್ಟೀವ್ ವಾ ಅವರ ವಿದಾಯದ ಸರಣಿಯಲ್ಲಿ ಪಾಂಟಿಂಗ್ ಅಡಿಲೇಡ್ ಓವಲ್ ಮೈದಾನದಲ್ಲಿ 242 ರನ್ ಗಳಿಸಿದ್ದರು. ಮೆಲ್ಬೋರ್ನ್‌ನಲ್ಲಿ 257 ರನ್ ಗಳಿಸಿದ್ದ ಪಾಂಟಿಂಗ್ ಆಸ್ಟ್ರೇಲಿಯಕ್ಕೆ 9 ವಿಕೆಟ್‌ಗಳ ಗೆಲುವು ತಂದಿದ್ದರು. ಈ ಗೆಲುವಿನೊಂದಿಗೆ ಆತಿಥೇಯರು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ್ದರು. 100ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಪಾಂಟಿಂಗ್ ಸರಣಿಯಲ್ಲಿ ಆಸ್ಟ್ರೇಲಿಯದ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಭಾರತ ಸರಣಿ ಗೆಲ್ಲುವುದಕ್ಕೆ ತಡೆಯಾಗಿ ನಿಂತಿದ್ದರು.
ಸಚಿನ್ ತೆಂಡುಲ್ಕರ್ 241 ರನ್, ಸಿಡ್ನಿ(2004)
ತನ್ನ ನೆಚ್ಚಿನ ಮೈದಾನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ 2004ರಲ್ಲಿ ಗಳಿಸಿದ್ದ 241 ರನ್ ಸಚಿನ್ ತೆಂಡುಲ್ಕರ್ ವೃತ್ತಿಜೀವನದ ಒಂದು ಅತ್ಯಂತ ಶ್ರೇಷ್ಠ ಇನಿಂಗ್ಸ್ ಆಗಿದೆ. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಚಿನ್ ಮೂರನೇ ದ್ವಿಶತಕ ಹಾಗೂ 32ನೇ ಶತಕ ದಾಖಲಿಸಿದರು. ಇದೇ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್(178)ಅವರೊಂದಿಗೆ 353 ರನ್ ಜೊತೆಯಾಟ ನಡೆಸಿದ್ದರು. ವೇಗದ ಬೌಲರ್ ಬ್ರೆಟ್ ಲೀ 39.3 ಓವರ್‌ಗಳಲ್ಲಿ 201 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದರು. ಭಾರತ 7 ವಿಕೆಟ್‌ಗೆ 705 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು.
ರಾಹುಲ್ ದ್ರಾವಿಡ್ 233 ರನ್, ಅಡಿಲೇಡ್(2003)
ಅಡಿಲೇಡ್‌ನಲ್ಲಿರುವ ಅಡಿಲೇಡ್ ಓವಲ್ ಮೈದಾನದಲ್ಲಿ 2003ರ ಡಿಸೆಂಬರ್‌ನಲ್ಲಿ ‘ಮಹಾಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ 233 ರನ್ ಗಳಿಸಿದ್ದರು. ಟೆಸ್ಟ್ ನಲ್ಲಿ 4ನೇ ದ್ವಿಶತಕದ ಸಿಡಿಸಿದ್ದ ದ್ರಾವಿಡ್ ಆಸ್ಟ್ರೇಲಿಯದಲ್ಲಿ ತನ್ನ ರನ್ ಗಳಿಸುವ ಸಾಮರ್ಥ್ಯವನ್ನು ಪ್ರಶ್ನಿಸಿದ್ದ ಟೀಕಾಕಾರರ ಬಾಯಿಮುಚ್ಚಿಸಿದ್ದರು. ದ್ರಾವಿಡ್ ಸಾಹಸದ ನೆರವಿನಿಂದ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಜಯಿಸಿ ಮೊದಲ ಬಾರಿ ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. 1980-81ರ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಭಾರತ ದಾಖಲಿಸಿದ್ದ ಮೊದಲ ಗೆಲುವು ಇದಾಗಿತ್ತು.







