4,000ಕ್ಕೂ ಅಧಿಕ ಹಾಲಿ, ಮಾಜಿ ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಬಾಕಿ !
![4,000ಕ್ಕೂ ಅಧಿಕ ಹಾಲಿ, ಮಾಜಿ ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಬಾಕಿ ! 4,000ಕ್ಕೂ ಅಧಿಕ ಹಾಲಿ, ಮಾಜಿ ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಬಾಕಿ !](/images/placeholder.jpg)
ಹೊಸದಿಲ್ಲಿ, ಡಿ. 4 : ಹಾಲಿ ಹಾಗೂ ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ 4,122 ಕ್ರಿಮಿನಲ್ ಪ್ರಕರಣಗಳು ಬಾಕಿಯಿದ್ದು ಅವುಗಳಲ್ಲಿ ಕೆಲವು ಮೂರು ದಶಕಗಳಿಗಿಂತಲೂ ಹಳೆಯ ಪ್ರಕರಣಗಳಾಗಿವೆ ಎಂದು ಸುಪ್ರೀಂ ಕೋರ್ಟಿಗೆ ಇಂದು ಮಾಹಿತಿ ನೀಡಲಾಗಿದೆ.
ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ಮೇಲಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಇಂದು ನಡೆಸುತ್ತಿದೆ.
ಈ ಹಿಂದಿನ ವಿಚಾರಣೆಯಂದು ನ್ಯಾಯಾಲಯ ಬಾಕಿ ಕ್ರಿಮಿನಲ್ ಪ್ರಕರಣಗಳ ಬಗ್ಗೆ ವಿವಿಧ ಹೈಕೋರ್ಟುಗಳಿಂದ ಹಾಗೂ ಸರಕಾರದಿಂದ ಮಾಹಿತಿ ಕೋರಿತ್ತು. ಈ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಅನುವಾಗಲು ಈ ಮಾಹಿತಿ ಕೇಳಲಾಗಿತ್ತು. ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಪಿಐಎಲ್ ದಾಖಲಿಸಿದವರಾಗಿದ್ದು ಅಪರಾಧಿಗಳೆಂದು ಘೋಷಿತರಾದ ಜನಪ್ರತಿನಿಧಿಗಳ ಮೇಲೆ ಜೀವನ ಪರ್ಯಂತ ನಿಷೇಧ ಹೇರಬೇಕು ಹಾಗೂ ಬಾಕಿ ಪ್ರಕರಣಗಳ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಅಪೀಲು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಅಮಿಕಸ್ ಕ್ಯುರೇ ಆಗಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಹಾಗೂ ವಕೀಲೆ ಸ್ನೇಹ ಕಲಿಟ ಅವರು ತಾವು ರಾಜ್ಯಗಳಿಂದ ಹಾಗೂ ಹೈಕೊರ್ಟುಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನ್ಯಾಯಾಲಯದ ಮುಂದಿರಿಸಿದರು.
ಈ ಮಾಹಿತಿಯಂತೆ ಒಟ್ಟು ಪ್ರಕರಣಗಳ ಪೈಕಿ 264 ಪ್ರಕರಣಗಳಲ್ಲಿ ವಿಚಾರಣೆಯನ್ನು ಹೈಕೋರ್ಟುಗಳು ತಡೆ ಹಿಡಿದಿವೆ. 1991ರಿಂದ ಬಾಕಿಯಿರುವ ಹಲವು ಪ್ರಕರಣಗಳಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ.