ಮಂಗಳೂರು: ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಎಸ್‌ಡಿಪಿಐ ಹಕ್ಕೊತ್ತಾಯ ಸಭೆ

ಮಂಗಳೂರು, ಡಿ.4: ‘ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ’ ಎಂಬ ಘೋಷಣೆಯೊಂದಿಗೆ ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ನಗರದ ಹಂಪನಕಟ್ಟೆಯಿಂದ ರ್ಯಾಲಿ ಹಾಗೂ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಹಕ್ಕೊತ್ತಾಯ ಸಭೆ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ‘ಅಯೋಧ್ಯೆಯಲ್ಲಿ ರಾಮಮಂದಿರವಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೆ ಬಾಬರಿ ಮಸೀದಿಯಿರುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಆದಾಗ್ಯೂ 1949ರಲ್ಲಿ ಈ ದೇಶದ ನೆಲದ ಕಾನೂನನ್ನು ತುಳಿದು ಬಾಬರಿ ಮಸೀದಿಯಲ್ಲಿ ಅಕ್ರಮವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ನೆಲೆಸಬೇಕಾದರೆ ಬಾಬರಿ ಮಸ್ಜಿದನ್ನು ಪುನರ್ ನಿರ್ಮಿಸಬೇಕು ಮತ್ತು ಅಲ್ಲಿ ಅಕ್ರಮವಾಗಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯನ್ನು ನಿರ್ಮೂಲನೆ ಮಾಡಬೇಕು. ಅದಕ್ಕಾಗಿ ಎಸ್‌ಡಿಪಿಐ ಕಾರ್ಯಕರ್ತರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ’ ಎಂದರು.
‘ಯಾವುದೇ ಮಂದಿರ ಅಥವಾ ಮಸೀದಿಗಳನ್ನು ಅಕ್ರಮವಾಗಿ ನಿರ್ಮಿಸಲೇಬಾರದು. ಆದರೆ, ಸಂಘಪರಿವಾರವು ಕೆಡವಲಾದ ಬಾಬರಿ ಮಸೀದಿಯಲ್ಲಿ ಮಂದಿರ ಕಟ್ಟಲು ಹೊರಟಿರುವುದು ಹಿಂದೂ ಧರ್ಮಕ್ಕೆ ಮಾಡುವ ದ್ರೋಹವಾಗಿದೆ. ಇದೀಗ ಬಾಬರಿ ಮಸೀದಿಯು ಕೇವಲ ಮಸೀದಿಯಾಗಿ ಉಳಿದಿಲ್ಲ. ದೇಶದ ಜನರ ಅಭಿಮಾನದ ಸಂಕೇತವಾಗಿದೆ. ಹಾಗಾಗಿ ಕೆಡವಲಾದ ಬಾಬರಿ ಮಸೀದಿಯನ್ನು ಪುನರ್ ನಿರ್ಮಿಸುವವರೆಗೆ ಹೋರಾಟ ನಿಲ್ಲದು’ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ನುಡಿದರು.
ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೇಜಸ್ ಪತ್ರಿಕೆಯ ವ್ಯವಸ್ಥಾಪಕ ನೌಷಾದ್ ಮಲಪ್ಪುರಂ, ಇಮಾಮ್ ಕೌನ್ಸಿಲ್‌ನ ರಾಜ್ಯ ಸಮಿತಿಯ ಸದಸ್ಯ ಮೌಲಾನಾ ಮುಅಝ್ಝಂ ಮುಖ್ಯ ಭಾಷಣಗೈದರು.
ವೇದಿಕೆಯಲ್ಲಿ ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆ್ಯಂಟನಿ ಪಿ.ಡಿ., ದಲಿತ ಮುಖಂಡ ಆನಂದ ಮಿತ್ತಬೈಲ್, ಪಿಯುಸಿಎಲ್ ದ.ಕ.ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್, ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ, ಇಮಾಮ್ ಕೌನ್ಸಿಲ್‌ನ ಜಾಫರ್ ಸಾದಿಕ್ ಫೈಝಿ, ಸಿಎಫ್‌ಐ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ., ಕಾರ್ಪೊರೇಟರ್ ಅಯಾಝ್, ಮುಖಂಡರಾದ ಜಲೀಲ್ ಕೃಷ್ಣಾಪುರ, ಅಬ್ದುಲ್ಲತೀಫ್ ಕೆ. ಪುತ್ತೂರು, ಶಾಹುಲ್ ಎಸ್.ಎಚ್., ರಫೀಕ್ ದಾರಿಮಿ ಮಲಾರ್, ಇಕ್ಬಾಲ್ ಗೂಡಿನಬಳಿ, ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸ್ವಾಗತಿಸಿದರು.







