ಬೆಳಗಾವಿ: ಜೀಪ್-ಟ್ರ್ಯಾಕ್ಟರ್ ಮುಖಾಮುಖಿ ಢಿಕ್ಕಿ; 6 ಮಂದಿ ಮೃತ್ಯು

ಬೆಳಗಾವಿ, ಡಿ.4: ಜೀಪ್ ಮತ್ತು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕು ಹಿರೇನಂದಿ ಗ್ರಾಮದ ಬಳಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿಕೊಂಡು ಬೊಲೆರೋದಲ್ಲಿ ಗೋಕಾಕ್‌ನ ತಮ್ಮ ಯರಗರವಿ ಗ್ರಾಮಕ್ಕೆ ವಾಪಸಾಗುತ್ತಿದ್ದ ಯಲ್ಲವ್ವ ಖಂಡ್ರೆ(60), ನೀಲವ್ವ(40), ಅನುಸೂಯ ನಾಯ್ಕರ(38), ಪಾರವ್ವ ಖಂಡ್ರಿ(30), ಭೀಮನಪ್ಪ ಪೂಜಾರಿ(38) ಹಾಗೂ ಮಹದೇವ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳಲ್ಲಿ ಇನ್ನು ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಗೋಕಾಕ್ ಮತ್ತು ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದಾಗಿ ಸುಮಾರು ಬೆಳಗ್ಗೆ 6 ಗಂಟೆಯವರೆಗೂ ಈ ಭಾಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಗೋಕಾಕ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸಾಲು ಗಟ್ಟಿ ನಿಂತಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು







