ಫರಂಗಿಪೇಟೆ: ಡಿ.7ರಿಂದ 19ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸಮ್ಮೇಳನಾಧ್ಯಕ್ಷರಾಗಿ ಪ್ರೊ. ತುಕಾರಾಮ ಪೂಜಾರಿ

ಬಂಟ್ವಾಳ, ಡಿ. 4: ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.7 ಮತ್ತು 8ರಂದು ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಎ.ಕೆ.ಮಹಾಬಲ ಶೆಟ್ಟಿ ಸಭಾಂಗಣದಲ್ಲಿ ಡಾ. ಎಫ್.ಎಚ್.ಒಡೆಯರ್ ವೇದಿಕೆಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ಮೋಹನ ರಾವ್ ತಿಳಿಸಿದ್ದಾರೆ.
ಅವರು ಮಂಗಳವಾರ ಬಿ.ಸಿ.ರೋಡ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ. 7ರಂದು ಸಂಜೆ 4.05ಕ್ಕೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಸ್ಮರಣ ಸಂಚಿಕೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೊಸ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಸೇವಾಂಜಲಿ ಫರಂಗಿಪೇಟೆ ಅಧ್ಯಕ್ಷ ಅರ್ಕುಳಬೀಡು ವಜ್ರನಾಥ ಶೆಟ್ಟಿ, ಉದ್ಯಮಿ ಬಿ.ಜಗನ್ನಾಥ ಚೌಟ, ಮುಹಮ್ಮದ್ ಬಾವ ಎಫ್. ಭಾಗವಹಿಸಲಿದ್ದಾರೆ ಎಂದರು. ಡಿ.8ರಂದು ಸಂಜೆ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.
ಜಿಪಂ ಸದಸ್ಯ ರವೀಂದ್ರ ಕಂಬಳಿ ಡಿ. 7ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಧ್ವಜಾರೋಹಣ ಮಾಡುವರು. ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕನ್ನಡ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 2.30ಕ್ಕೆ ತುಂಬೆ ಪಪೂ ಕಾಲೇಜಿನಿಂದ ಸೇವಾಂಜಲಿ ಸಭಾಂಗಣದವರೆಗೆ ವಿವಿಧ ಸ್ತಬ್ದ ಚಿತ್ರಗಳು ಹಾಗೂ ಬ್ಯಾಂಡ್ ವಾದನದೊಂದಿಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯುವುದು. ತುಂಬೆ ಬಿ.ಎ.ಸಮೂಹ ಸಂಸ್ಥೆಗಳ ಬಿ.ಅಬ್ದುಲ್ ಸಲಾಂ ಉದ್ಘಾಟಿಸುವರು. ಮಧ್ಯಾಹ್ನ 3.45ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ವಸ್ತುಪ್ರದರ್ಶನ ಉದ್ಘಾಟಿಸುವರು. ಪುಸ್ತಕ ಪ್ರದರ್ಶನ ಮಳಿಗೆಯನ್ನು ಕರ್ನಾಟಕ ಕತಾರ್ ಸಂಘದ ಉಪಾಧ್ಯಕ್ಷ ಮೂಡಂಬೈಲು ರವಿ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಸಂಜೆ 6.05ರಿಂದ ಭಾಷೆ ಸಂಸ್ಕೃತಿ ಗೋಷ್ಠಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ವಿಷಯ ಮಂಡಿಸುವರು. ಸಂಜೆ 6.45ರಿಂದ ದೃಶ್ಯಮಾಧ್ಯಮಗಳಲ್ಲಿ ಧಾರಾವಾಹಿಗಳು ವಿಷಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್ ಅಧ್ಯಕ್ಷತೆಯಲ್ಲಿ ನಡೆಯುವುದು. ಡಾ. ವಿಜಯಲಕ್ಷ್ಮೀ ಪೊಳಲಿ, ಡಾ. ವೀಣಾ ಪಾಲಚಂದ್ರ ವಿಷಯ ಮಂಡಿಸುವರು. ಡಿ. 8ರಂದು ಸಾಹಿತ್ಯ ಯುವ ಸ್ಪಂದನ, ಬಂಟ್ವಾಳ ಇತಿಹಾಸ ಮತ್ತು ಮರೆಯಲಾರದ ಮಹಾನುಭಾವರು ಗೋಷ್ಠಿ ನಡೆಯಲಿದೆ. ಸಂಜೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಎಸೆಸೆಲ್ಸಿ ಸಾಧಕರಿಗೆ ಸನ್ಮಾನ ನಡೆಯುವುದು. ರಾತ್ರಿ ಭೀಷ್ಮ ಸೇನಾಧಿಪತ್ಯ ತಾಳಮದ್ದಳೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಪೂಂಜ, ನಿಕಟಪೂರ್ವ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಪದಾಧಿಕಾರಿಗಳಾದ ಡಾ. ನಾಗವೇಣಿ ಮಂಚಿ, ಗಂಗಾಧರ ಆಳ್ವ, ರವೀಂದ್ರ ಕುಕ್ಕಾಜೆ, ಮೋಹನ್ ಕೆ.ಶ್ರೀಯಾನ್ ಉಪಸ್ಥಿತರಿದ್ದರು.