ದೇಶದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ: ಬಾಳ್ಕುದ್ರು ಸ್ವಾಮೀಜಿ

ಮಲ್ಪೆ, ಡಿ. 4: ಆಧುನಿಕ ಜಂಜಾಟದ ಜೀವನದಲ್ಲಿ ಮನುಷ್ಯ ಲೌಕಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಚಿಂತನೆ ಮಾಡುವುದು ಅಗತ್ಯವಾಗಿದೆ. ದೇಶದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ನಾವೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಒಂದುಗೂಡಿಸಿ ಉನ್ನತ ಸ್ಥಿತಿಗೆ ಕೊಂಡೊಯ್ಯಬೇಕಾಗಿದೆ ಎಂದು ಬಾಳ್ಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.
ಕೊಡವೂರು ಶ್ರೆ ಶಂಕರನಾರಾಯಣ ದೇವಸ್ಥಾನದಲ್ಲಿ ರವಿವಾರ ಲೋಕ ಕಲ್ಯಾಣಾರ್ಥವಾಗಿ ನಡೆದ ಏಕಾದಶ ಲಕ್ಷ ತುಳಸಿ ಬಿಲ್ವಾರ್ಚನೆ ಧಾರ್ಮಿಕ ಸಭೆಯಲ್ಲಿ ಅವರು ದೇವಳದ 2019ರ ದಿನದರ್ಶಿಕೆ ಬಿಡುಗಡೆ ಹಾಗೂ ಶಂಕರ ನಾರಾಯಣ ಸಹಸ್ರನಾಮಾವಳಿ ಮತ್ತು ಸ್ತೋತ್ರ ಮಂಜರಿ ಪುಸ್ತಕ ಬಿಡುಗಡೆ ಗೊಳಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತ ನಾಡಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ವಹಿಸಿದ್ದರು. ಶಾಸಕ ಕೆ.ರಘಪತಿ ಭಟ್, ದೇವಸ್ಥಾನದ ಪ್ರಧಾನ ತಂತ್ರಿ ವೆ.ಮೂ.ಹಯವದನ ತಂತ್ರಿ, ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ್ ಹಂದೆ, ನಿಸರ್ಗ ಆಯುರ್ವೆದಿಕ್ ಮೆಡಿಕಲ್ ಸೆಂಟರಿನ ಡಾ.ಅಶೋಕ್ ಕುಮಾರ್, ಉಡುಪಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜು ನಾಥ್ ಉಪಾದ್ಯ, ಉದ್ಯಮಿ ಹರಿಯಪ್ಪ ಕೋಟ್ಯಾನ್, ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು, ಶಂಕರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ.ಸುವರ್ಣ ಉಪಸ್ಥಿತರಿದ್ದರು.
ವಾಸುದೇವ ಭಟ್ ಪೆರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ್ ಭಟ್ ಅಗ್ರಹಾರ ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿದರು.