ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆ ಪ್ರಕರಣ: ಪ್ರಧಾನ ಆರೋಪಿ ಯೋಗೇಶ್ ರಾಜ್ ಬಜರಂಗದಳದ ಸದಸ್ಯ
ನಾಲ್ವರ ಬಂಧನ
ಬಲಂದಶಹರ್, ಡಿ. 4: ಗೋಹತ್ಯೆ ವದಂತಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರದ ಸಂದರ್ಭ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿ ಸಂಘಪರಿವಾರದ ಸಂಘಟನೆಗಳಾದ ಬಜರಂಗ ದಳದ ಜಿಲ್ಲಾ ಮುಖ್ಯಸ್ಥ, ಬಿಜೆಪಿ ಯುವ ಘಟಕದ ಸದಸ್ಯ ಹಾಗೂ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತನ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಪ್ರಧಾನ ಆರೋಪಿಯಾಗಿರುವ ಬಜರಂಗದಳದ ಯೋಗೇಶ್ ರಾಜ್ ಸೋಮವಾರ 4 ಗಂಟೆಯಿಂದ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ಹತ್ಯೆ, ಹತ್ಯೆ ಯತ್ನ ಹಾಗೂ ಇತರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಈತ ಗೋಹತ್ಯೆಯ ಬಗ್ಗೆ ಪ್ರತ್ಯೇಕ ದೂರು ನೀಡಿದ ವ್ಯಕ್ತಿ. ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಪೊಲೀಸರು ಪ್ರತಿದಾಳಿ ನಡೆಸಿದ ಸಂದರ್ಭ ಯುವಕ ಸುಮಿತ್ ಮೃತಪಟ್ಟಿದ್ದಾರೆ. ಅವರ ಹೆಸರನ್ನು ಇತರ 27 ಮಂದಿ ಹಾಗೂ 60 ಅಪರಿಚಿತ ವ್ಯಕ್ತಿಗಳೊಂದಿಗೆ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಗೇಶ್ ರಾಜ್ ಅಲ್ಲದೆ, ಬಿಜೆಪಿ ಯುವ ಘಟಕದ ಸದಸ್ಯ ಶಿಖಾರ್ ಅಗ್ರವಾಲ್ ಹಾಗೂ ವಿಎಚ್‌ಪಿ ಸದಸ್ಯ ಉಪೇಂದ್ರ ರಾಘವ ಅವರ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಲಾಗಿದೆ.
‘‘ನಾವು ಇನ್ನಷ್ಟು ಜನರನ್ನು ಬಂಧಿಸಲಿದ್ದೇವೆ ಹಾಗೂ ಸಾಕ್ಷಗಳನ್ನು ಸಂಗ್ರಹಿಸಲಿದ್ದೇವೆ. ಈ ಪ್ರಕರಣದ ತನಿಖೆ ನಡೆಸಲು ಸಿಟ್ ತಂಡವನ್ನು ರೂಪಿಸಲಾಗಿದೆ.’’ ಎಂದು ಮೀರತ್ ವಲಯದ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಸುಬೋಧ್ ಕುಮಾರ್ ಅವರಿಗೆ ಗುಂಡು ತಗುಲಿದ ಬಳಿಕ ಪೊಲೀಸ್ ಅಧಿಕಾರಿಗಳು ಅವರನ್ನು ಬಿಟ್ಟು ತೆರಳಿರುವ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಗುಂಪಿನಲ್ಲಿದ್ದ ಹೆಚ್ಚಿನವರು ಬಜರಂಗದಳ, ಹಿಂದೂ ಯುವ ವಾಹಿನಿ ಹಾಗೂ ಶಿವಸೇನೆಗೆ ಸೇರಿದವರು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.